ಗಜೆಟ್ ಅಧಿಸೂಚನೆಯಂತೆ ಪರಿಹಾರಕ್ಕೆ ಆಗ್ರಹ

Update: 2022-01-07 14:58 GMT

ಮಂಗಳೂರು, ಜ.7: ಕೇಂದ್ರ ಸರ್ಕಾರದ ಗಜೆಟ್ ಅಧಿಸೂಚನೆ ಪ್ರಕಾರವೇ ಹೆದ್ದಾರಿ ಅಗಲೀಕರಣಕ್ಕೆ ಸ್ವಾಧೀನಪಡಿಸಿದ ಭೂಮಿಗೆ ಪರಿಹಾರ ನೀಡುವಂತೆ ಭೂ ಮಾಲೀಕರ ಹೋರಾಟ ಸಮಿತಿ ಎನ್‌ಎಚ್ 169(ರಿ) ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿಗಮ (ಎನ್‌ಎಚ್‌ಐಎ)ವನ್ನು ಆಗ್ರಹಿಸಿದೆ.

ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥೋಮಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ರಾ.ಹೆ.-169ರಹಲ್ಲಿ ಮಂಗಳೂರು-ಮೂಡುಬಿದಿರೆ-ಕಾರ್ಕಳ ಹೆದ್ದಾರಿ ಅಗಲೀಕರಣ ಬಗ್ಗೆ 2016 ಮಾ.16ಂದು ಎನ್‌ಎಚ್‌ಎಐ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು ಎಂದರು.

ಉಡುಪಿ ಜಿಲ್ಲೆಯ ಸಾಣೂರು ಮತ್ತು ಕಾಂತಾವರ ಗ್ರಾಮ ಹಾಗೂದ.ಕ. ಜಿಲ್ಲೆಯ ಪದವು ಸಹಿತ 18 ಗ್ರಾಮಗಳಲ್ಲಿ 1,81,615 ಚದರ ಮೀಟರ್ ವಿಸ್ತಾರದ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಕಲಂ 3ಎ ಅಡಿಯಲ್ಲಿ ಭೂ ಸ್ವಾಧೀನಕ್ಕೆ ಅಧಿಸೂಚನೆ ನೀಡಿತ್ತು. ಉಡುಪಿಯ ಎರಡು, ದ.ಕ.ಜಿಲ್ಲೆಯ ಬೆಳುವಾಯಿ, ಪಡು ಮಾರ್ನಾಡು, ತೆಂಕ ಮಿಜಾರ್, ಬಡಗ ಎಡಪದವು, ಬಡಗ ಉಳಿಪಾಡಿ, ಮೂಡುಪೆರಾರ್, ಕಂದಾವರ, ಮೂಳೂರು, ತಿರುವೈಲು, ಕುಡುಪು ಗ್ರಾಮಗಳಲ್ಲಿ ಒಟ್ಟು 3,33,375.41 ಚ.ಮೀ. ವಿಸ್ತಾರ ಜಮೀನು ಸ್ವಾಧೀನಕ್ಕೆ ಮುಂದಾಗಿತ್ತು. ಇದರಲ್ಲಿ 127.62921 ಚ.ಹೆ. ಜಮೀನನ್ನು ಸ್ವಾಧೀನಪಡಿಸಲು 2020 ಜು.9ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಭೂ ಮಾಲಕರಿಂದ ದಾಖಲೆ ಪಡೆದು ಭೂಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಇಲ್ಲಿ ಕೃಷಿ ಭೂಮಿಗೆ ಅತಿ ಕಡಿಮೆ ಪರಿಹಾರ ಮೊತ್ತ ನಿಗದಿಪಡಿಸಿ ಆದೇಶ ನೀಡಲಾಗಿತ್ತು. ಇದರ ವಿರುದ್ಧ 16 ಗ್ರಾಮಗಳ 230ಕ್ಕೂ ಅಧಿಕ ಮಂದಿ ಭೂ ಮಾಲೀಕರು ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದು, ಭೂಸ್ವಾಧೀನ ಪರಿಹಾರ ನೀಡಿಕೆ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದರು.

ನಾವು ಭೂಸ್ವಾಧೀನ ಹಾಗೂ ರಸ್ತೆ ಅಗಲೀಕರಣಕ್ಕೆ ವಿರೋಧಿಯಲ್ಲ. ಆದರೆ ಭೂಸ್ವಾಧೀನ ಅಧಿಕಾರಿಗಳು ಅವೈಜ್ಞಾನಿಕವಾಗಿ ಪರಿಹಾರಕ್ಕೆ ಶಿಫಾರಸು ಮಾಡಿದ್ದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದೇವೆ. ಪರಿಹಾರ ನೀಡಿಕೆ ವೇಳೆ ಕೃಷಿ ಹಾಗೂ ಕೃಷಿಯೇತರ ಎಂದು ವರ್ಗೀಕರಿಸಲಾಗಿದೆ. ವಾಸ್ತವದಲ್ಲಿ ಕನ್ವರ್ಷನ್ ಭೂಮಿಗೆ ಪ್ರತ್ಯೇಕ ಪರಿಹಾರ ಎಂಬ ಮಾನದಂಡ ಇಲ್ಲ. ಆದರೆ ಭೂಸ್ವಾಧೀನ ಅಧಿಕಾರಿಗಳು ಕೃಷಿ ಭೂಮಿಗೆ ಅತ್ಯಂತ ಕಡಿಮೆ ಪರಿಹಾರ ನಿಗದಿಗೊಳಿಸಿ, ಪರಿವರ್ತಿತ ಭೂಮಿಗೆ ದುಪ್ಪಟ್ಟು ಪರಿಹಾರ ನಿಗದಿ ಪಡಿಸಿದ್ದಾರೆ. ಅಲ್ಲದೆ ತಮಗೆ ಬೇಕಾದಂತೆ ಯೋಜನೆಯ ಅಲೈನ್‌ಮೆಂಟ್‌ನ್ನು ಬದಲಾಯಿಸಿದ್ದಾರೆ. ಅಧಿಕಾರಿಗಳ ಈ ಕ್ರಮದ ಬಗ್ಗೆ ಸಂಸದರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದರು.

ವಿಶೇಷ ಭೂಸ್ವಾಧೀನ ಅಧಿಕಾರಿಗಳು ಪರಿಹಾರ ನೀಡಿಕೆ ವೇಳೆ ಭೂ ಮಾಲೀಕರಿಂದ ಶೇ.12ರ ದರದಲ್ಲಿ ಜಿಎಸ್‌ಟಿ ವಸೂಲಿ ಮಾಡುತ್ತಿದ್ದಾರೆ. ಭೂ ಸಂತ್ರಸ್ತರಿಂದ ಪರಿಹಾರ ನೀಡಿಕೆಗೆ ಜಿಎಸ್‌ಟಿ ವಸೂಲಿ ಮಾಡಿರುವುದು ಸರಿಯಲ್ಲ ಎಂದರು. ಹೋರಾಟ ಸಮಿತಿ ಕಾರ್ಯದರ್ಶಿ ವಿಶ್ವಜಿತ್, ರತ್ನಾಕರ್, ಜಯರಾಮ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News