2021ರಲ್ಲಿ ಬ್ಲಡ್ ಡೋನರ್ಸ್‌ನಿಂದ 55 ರಕ್ತದಾನ ಶಿಬಿರ

Update: 2022-01-07 15:01 GMT

ಮಂಗಳೂರು, ಜ.7: ಬ್ಲಡ್ ಡೋನರ್ಸ್ ಮಂಗಳೂರು ಹಲವಾರು ಸಮಾಜ ಮುಖಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಹಲವು ಕಡೆಗಳಲ್ಲಿ 55 ರಕ್ತದಾನ ಕ್ಯಾಂಪ್ ನಡೆಸಿ, 3513 ಯುನಿಟ್ ರಕ್ತ ಸಂಗ್ರಹಿಸಿದೆ ಎಂದು ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರ.ಕಾರ್ಯದರ್ಶಿ ನವಾಝ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಷದಲ್ಲಿ 648 ಮಂದಿ ರಕ್ತದಾನಿಗಳು ತುರ್ತು ಸಮಯದಲ್ಲಿ ರಕ್ತದಾನ ಮಾಡಿದ್ದಾರೆ. 3761 ಮಂದಿ ರಕ್ತದ ಪ್ರಯೋಜನ ಪಡೆದಿದ್ದಾರೆ. ವಿದೇಶದಲ್ಲಿ 223 ಯುನಿಟ್ ರಕ್ತ ಸಂಗ್ರಹಿಸಲಾಗಿದ್ದು, ಸುಮಾರು 43 ಲಕ್ಷ ರೂ. ಹಣವನ್ನು ಬಡವರ ಅನುಕೂಲಕ್ಕೆ ವಿನಿಯೋಗಿಸಲಾಗಿದೆ. 1053 ಮಂದಿಗೆ ಆಹಾರ ಪೊಟ್ಟಣ, 350 ಮಂದಿಗೆ ಉಚಿತವಾಗಿ ಆರೋಗ್ಯದ ಮಾಹಿತಿ, 130ಕ್ಕೂ ಹೆಚ್ಚು ಮಂದಿಗೆ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸೇವೆ ನೀಡಿದೆ. ನಮ್ಮ ಸೇವಾ ಚಟುವಟಿಕೆಯನ್ನು ಗುರುತಿಸಿ ವಲ್ಡ್ ಬುಕ್ ಆ್ ರೆಕಾರ್ಡ್ ಲಂಡನ್‌ನಿಂದ ಅಂತಾರಾಷ್ಟ್ರೀಯ ಸೇವರ್ ಅವಾರ್ಡ್ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ರಕ್ತ ಸಂಗ್ರಹ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಕ್ತದ ಅಭಾವ ಬೀರುವ ಸಾಧ್ಯತೆ ಇದೆ. ಇದೀಗ ವೀಕೆಂಡ್ ಕರ್ಫೂ ಜಾರಿಗೊಳಿಸಿದ್ದು, ರಕ್ತದಾನಕ್ಕೆ ತೆರಳುವ ದಾನಿಗಳಿಗೆ ಸಂಕಷ್ಟವಾಗಿದೆ. ವೀಕೆಂಡ್ ಕರ್ಫೂ ವೇಳೆ ರಕ್ತದಾನಿಗಳಿಗೆ ರಕ್ತ ನೀಡಲು ಅನುವು ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಹಕರಿಸಬೇಕು. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬ್ಲಡ್ ಡೋನರ್ಸ್ ಸಹಕಾರದೊಂದಿಗೆ ಜ.26ರಂದು ‘ದೇಶಕ್ಕಾಗಿ ಸಂವಿಧಾನ, ಜೀವಕ್ಕಾಗಿ ರಕ್ತದಾನ’ ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರ ಆಯೋಜಿಸಿದ್ದೇವೆ. ಸುಮಾರು 1500 ಯುನಿಟ್ ರಕ್ತಸಂಗ್ರಹದ ಗುರಿ ಹೊಂದಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರಿನ ಅಧ್ಯಕ್ಷ ಸಿದ್ದಿಕ್, ಕಾರ್ಯದರ್ಶಿ ಶಾಹುಲ್ ಹಮೀದ್, ಕಾರ್ಯನಿರ್ವಾಹಕ ಫಾರುಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News