ಪ್ರಧಾನಿ ಕಾದಿದ್ದು 15 ನಿಮಿಷ, ರೈತರು ಒಂದೂವರೆ ವರ್ಷ ಕಾದಿದ್ದರು: ನವಜೋತ್ ಸಿಂಗ್ ಸಿಧು

Update: 2022-01-07 16:34 GMT

ಚಂಡಿಗಢ, ಜ. 6: ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 15 ನಿಮಿಷ ಸಮಸ್ಯೆ ಎದುರಿಸಿದರು. ಆದರೆ, ರೈತರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ಕಾಲ ಹೋರಾಟ ನಡೆಸಿದರು ಎಂದು ಪಂಜಾಬ್ ನ ಕಾಂಗ್ರೆಸ್ ವರಿಷ್ಠ ನವಜೋತ್ ಸಿಂಗ್ ಸಿಧು  ವ್ಯಂಗ್ಯವಾಡಿದ್ದಾರೆ. 

ಬರ್ನಾಲದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಸಿಧು, ‘‘ನಾನು ಪ್ರಧಾನಿ ಅವರಲ್ಲಿ ಒಂದು ಮಾತು ಕೇಳಲು ಬಯಸುತ್ತೇನೆ. ಅದೇನೆಂದರೆ, ನಮ್ಮ ರೈತ ಸಹೋದರರು ದಿಲ್ಲಿ ಗಡಿಯಲ್ಲಿ ಒಂದು ವರ್ಷಕ್ಕಿಂತಲೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು. ಒಂದೂವರೆ ವರ್ಷ ಅಲ್ಲಿಯೇ ಇದ್ದರು. ನಿಮ್ಮ ಮಾಧ್ಯಮ ಏನನ್ನೂ ಹೇಳಲಿಲ್ಲ. ಆದರೆ, ನೀವು 15 ನಿಮಿಷ ಕಾದದ್ದು ದೊಡ್ಡ ಸುದ್ದಿಯಾಗಿದೆ. ಈ ದ್ವಿಮುಖ ನೀತಿ ಯಾಕೆ? ನನಗೆ ಹೇಳಿ’’ ಎಂದು ಪ್ರಶ್ನಿಸಿದ್ದಾರೆ. ಭರವಸೆ ನೀಡಿದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬದಲು ಪ್ರಧಾನಿ ರೈತರ ಅಲ್ಪ ಆದಾಯವನ್ನು ಕೂಡ ಕಿತ್ತುಕೊಂಡಿದ್ದಾರೆ. ಫಿರೋಝ್ಪುರದಲ್ಲಿ ಆಯೋಜಿಸಲಾಗಿದ್ದ ಪ್ರಧಾನಿ ಅವರ ರ್ಯಾಲಿಯಲ್ಲಿ ಕೇವಲ 500 ಜನರು ಮಾತ್ರ ಪಾಲ್ಗೊಂಡಿದ್ದರು. ಆದರೆ, ರ್ಯಾಲಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಖಾಲಿ ಖುರ್ಚಿಗೆ ಭಾಷಣ ಮಾಡಿದರು. ಅವರಿಗೆ ನಾಚಿಕೆ ಆಗುವುದಿಲ್ಲವೇ ? ಎಂದು ಅವರು ಪ್ರಶ್ನಿಸಿದರು. 

‘‘ಮರ್ಯಾದೆ ಇಲ್ಲದ ಅಮರಿಂದರ್ ಸಿಂಗ್ನಂತೆ ಪ್ರಧಾನಿ ಅವರು ಖಾಲಿ ಕುರ್ಚಿಗಳ ಮುಂದೆ ಭಾಷಣ ಮಾಡಲಿಲ್ಲ. 70,000 ಸಾವಿರ ಕುರ್ಚಿಗಳನ್ನು ಹಾಕಿದ್ದರೂ ಕೇವಲ 500 ಜನರು ಮಾತ್ರ ಪಾಲ್ಗೊಂಡ ಹಿನ್ನೆಲೆಯಲ್ಲಿ ಅವಮಾನ ಮರೆ ಮಾಚಲು ಭದ್ರತಾ ಲೋಪ ಎಂದು ಆರೋಪಿಸಿ ಮಾಧ್ಯಮದ ಗಮನವನ್ನು ಬೇರೆಡೆಗೆ ಸೆಳೆದರು’’ ಎಂದು ಹೇಳಿದರು. 

‘‘ಇದು ಪಂಜಾಬ್ನಲ್ಲಿ ಬಿಜೆಪಿಯ ಭಾರೀ ವಿಫಲತೆ. ಅದು ಗಾಳಿ ಹೋದ ಬಲೂನಿನಂತೆ ಆಗಿದೆ’’ ಎಂದು ಅವರು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ನಡುವೆ, ಇಂದು ಮಾತನಾಡಿದ ಪಂಜಾಬ್ ಬಿಜೆಪಿಯ ವರಿಷ್ಠ ಅಶ್ವನಿ ಶರ್ಮಾ, ಫಿರೋಝ್ಪುರ ರ್ಯಾಲಿಯಲ್ಲಿ ಸಾಕಷ್ಟು ಜನರು ಭಾಗವಹಿಸಿಲ್ಲ ಎಂಬ ಆರೋಪ ಆಧಾರ ರಹಿತ ಎಂದು ತಳ್ಳಿ ಹಾಕಿದ್ದಾರೆ. ಅಲ್ಲದೆ, ಪಕ್ಷದ ಕಾರ್ಯಕರ್ತರು ರ್ಯಾಲಿ ಸ್ಥಳಕ್ಕೆ ತಲುಪದಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News