×
Ad

ಲಾಕ್‌ ಡೌನ್ ಸಂದರ್ಭ ಆಟೊಮೊಬೈಲ್ ಉದ್ಯಮವನ್ನು ಅಗತ್ಯ ಸೇವೆಯಾಗಿ ಪರಿಗಣಿಸಲು ಮನವಿ

Update: 2022-01-07 23:23 IST

ಮಂಗಳೂರು, ಜ.7: ಸಂಪೂರ್ಣ ಲಾಕ್‌ಡೌನ್ ಸಂದರ್ಭ ಆಟೋಮೊಬೈಲ್ ಉದ್ಯಮವನ್ನು ಅಗತ್ಯ ಸೇವೆಯಾಗಿ ಪರಿಗಣಿಸು ವಂತೆ ದ.ಕ. ಆಟೊಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಶನ್ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ದ.ಕ.ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅಶೋಸಿಯೇಶನ್ ಅಗತ್ಯ ವಸ್ತುಗಳ ಸಾಗಣೆ, ಆಂಬ್ಯುಲೆನ್ಸ್ ಸೇವೆ, ಸರಕಾರಿ ವಾಹನಗಳು ಮತ್ತು ವೈದ್ಯರು, ಮುಂಚೂಣಿ ಕೆಲಸಗಾರರು, ಬ್ಯಾಂಕ್ ಉದ್ಯೋಗಿಗಳಂತಹ ಇತರ ಅಗತ್ಯ ಸೇವಾ ಪೂರೈಕೆದಾರರ ವೈಯಕ್ತಿಕ ಸಾರಿಗೆಗಾಗಿ ಆಟೊಮೊಬೈಲ್ ವಾಹನಗಳ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಒಂದು ವೇಳೆ ಕೆಟ್ಟು ನಿಂತರೆ ಈ ವಾಹನಗಳು ನಿರುಪಯುಕ್ತವಾಗುತ್ತವೆ. ಸಮಯಕ್ಕೆ ಸರಿಯಾಗಿ ವಾಹನಗಳ ರಿಪೇರಿ ಮಾಡದಿರುವುದರಿಂದ ಜನರ ಸುರಕ್ಷತೆಗೂ ಅಡ್ಡಿಯಾಗುತ್ತದೆ. ಕೋವಿಡ್ -19 ಸಾಂಕ್ರಾಮಿಕದ ಮೂರನೇ ಅಲೆಯ ಹಿನ್ನಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರುವ ಸಂದರ್ಭ ಬಂದಲ್ಲಿ, ಆಟೊಮೊಬೈಲ್ ಸಂಬಂಧಿತ ವ್ಯಾಪಾರಗಳನ್ನು ಅಗತ್ಯ ಸೇವೆಗಳಾಗಿ ಪರಿಗಣಿಸಬೇಕು ಮತ್ತು ಕಟ್ಟುನಿಟ್ಟಾದ ಮಾರ್ಗಸೂಚಿಗಳಡಿ ಹಾಗೂ ನಿಬರ್ಂಧಿತ ಕೆಲಸದ ಸಮಯಗಳನ್ನು ಅನುಸರಿಸಿ ಕಾರ್ಯನಿರ್ವಹಿಸಲು ಅನುಮತಿಸಬೇಕು ಎಂದು ಒತ್ತಾಯಿಸಿದೆ.

ಈ ಹಿಂದಿನ ಎರಡು ಲಾಕ್‌ಡೌನ್‌ಗಳಿಂದ ಆರ್ಥಿಕವಾಗಿ ಜರ್ಜರಿತಗೊಂಡಿರುವ ಆಟೋ ವ್ಯಾಪಾರಿಗಳಿಗೆ ಸಂಬಳ ಪಾವತಿ, ಬಾಡಿಗೆ ಮತ್ತು ತೆರಿಗೆ ಪಾವತಿಯಂತಹ ಮೂಲಭೂತ ಅಗತ್ಯಗಳನ್ನು ಪೂರೈಸಲು ಇದು ಸಹಾಯವಾಗುತ್ತದೆ. ಆಟೊಮೊಬೈಲ್ ವ್ಯಾಪಾರವು ಕ್ಲಸ್ಟರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಮಾನವ ಸಂಪನ್ಮೂಲದ ಬಳಕೆ ಅಥವಾ ವೈಯಕ್ತಿಕ ಸಂಪರ್ಕ ಕನಿಷ್ಟವಾಗಿರುತ್ತದೆ. ಹಾಗಾಗಿ ಇದು ಸಾಂಕ್ರಾಮಿಕ ರೋಗದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಶ್ರೀಲಾಸ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News