ಕಡ್ಡಾಯ ಕೋವಿಡ್ ನೆಗೆಟಿವ್ ವರದಿ; ಗೋವಾ ಗಡಿಯಲ್ಲಿ ಗೊಂದಲ
ಕಾನಕೋಣ: ಗೋವಾದಿಂದ ಕಾರವಾರ ಮೂಲಕ ಕರ್ನಾಟಕ ಪ್ರವೇಶಿಸುತ್ತಿರುವ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವಂತೆ ಕರ್ನಾಟಕದ ಅಧಿಕಾರಿಗಳು ಕರ್ನಾಟಕ- ಗೋವಾ ಗಡಿಯ ಮಲಜಿ ಚೆಕ್ ಪೋಸ್ಟ್‌ನಲ್ಲಿ ಸೂಚಿಸಿದ್ದು, ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಕರ್ನಾಟಕ ಪ್ರವೇಶಿಸುವ ಹೊರ ರಾಜ್ಯದವರು 72 ಗಂಟೆಗಳ ಒಳಗಿನ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಪ್ರಸ್ತುತಪಡಿಸುವುದು ಕಡ್ಡಾಯ ಎಂಬ ನಿಯಮಾವಳಿಯನ್ನು ರಾಜ್ಯದ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಎರಡೂ ಲಸಿಕಾ ಡೋಸ್‌ಗಳನ್ನು ಪಡೆದ ಪ್ರಮಾಣಪತ್ರ ಕರ್ನಾಟಕ ಪ್ರವೇಶಿಸಲು ಸೂಕ್ತ ದಾಖಲೆಯಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ನೋಂದಣಿಯ ವಾಹನಗಳನ್ನು ಅಧಿಕಾರಿಗಳು ಯಾವುದೇ ತಪಾಸಣೆ ಇಲ್ಲದೇ ರಾಜ್ಯಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ. ಆದರೆ ಗೋವಾ ನೋಂದಣಿಯ ವಾಹನಗಳನ್ನು ದೃಢೀಕರಣಕ್ಕಾಗಿ ನಿಲ್ಲಿಸಲಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಎಂದು ಸ್ಥಳೀಯರು ಹೇಳಿದ್ದಾರೆ.
ಗುರುವಾರದಿಂದೀಚೆಗೆ ಕದಂಬ ಬಸ್ ಗಳು ಸೇರಿದಂತೆ ಗೋವಾದಿಂದ ಆಗಮಿಸುವ ಎಲ್ಲ ವಾಹನಗಳನ್ನು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಇಲ್ಲದಿದ್ದರೆ ತಡೆಯಲಾಗುತ್ತಿದೆ. "ಆರ್‌ಟಿ-ಪಿಸಿಆರ್ ವರದಿ ಪಡೆಯಲು ಕನಿಷ್ಠ 8 ಗಂಟೆ ಬೇಕು. ಕೇವಲ ಮರ್ಮಗೋವಾದಲ್ಲಷ್ಟೇ ಈ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಬಾಡಿಗೆ ಕಾರಿನ ಚಾಲಕರೊಬ್ಬರು ಹೇಳುತ್ತಾರೆ.
ಗಡಿಭಾಗದವರು ಸೇರಿದಂತೆ ಹಲವು ಮಂದಿ ಕಾರವಾರದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ತಮ್ಮ ಬಂಧು ಬಳಗದವರನ್ನೂ ನೋಡಲೂ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ವಿವರಿಸಿದ್ದಾರೆ.