ವಾರಾಂತ್ಯ ಕರ್ಫ್ಯೂ: ಉಡುಪಿ ಜಿಲ್ಲೆಯಲ್ಲಿ ವಾಹನ, ಜನ ಸಂಚಾರ ವಿರಳ
ಉಡುಪಿ, ಜ.8: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಉಡುಪಿ ಜಿಲ್ಲೆಯಾದ್ಯಂತ ವಾಹನ ಹಾಗೂ ಜನ ಸಂಚಾರ ಸಾಕಷ್ಟು ವಿರಳವಾಗಿ ಕಂಡು ಬಂದವು. ಬಸ್ ಓಡಾಟ, ಅಂಗಡಿ ತೆರಯಲು ಅವಕಾಶ ನೀಡಿದರೂ ಜನ ಸಂಚಾರ ಇಲ್ಲದ ಪರಿಣಾಮ ವ್ಯಾಪಾರಸ್ಥರು ಬಹಳ ನಷ್ಟ ಅನುಭವಿಸಿದರು.
ಉಡುಪಿ ನಗರ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಬೈಂದೂರು, ಹಿರಿಯಡ್ಕ, ಮಣಿಪಾಲ, ಕಾಪು, ಹೆಬ್ರಿಗಳಲ್ಲಿ ಖಾಸಗಿ ವಾಹನ ಹಾಗೂ ಜನ ಸಂಚಾರ ವಿರಳ ಬಿಟ್ಟರೆ ಉಳಿದವು ಸಾಮಾನ್ಯದಂತೆಯೇ ಕಂಡುಬಂದವು. ಬೆಳಗ್ಗೆ ಹೆಚ್ಚು ಜನ ಸಂಚಾರ ಕಂಡುಬಂದರೆ ಮಧ್ಯಾಹ್ನದ ಬಳಿಕ ಹೆಚ್ಚಿನ ರಸ್ತೆಗಳು ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು.
ಖಾಸಗಿ ಸರ್ವಿಸ್, ಸಿಟಿ ಹಾಗೂ ಕೆಎಸ್‌ಆರ್‌ಟಿಸಿ ಮತ್ತು ನರ್ಮ್ ಬಸ್‌ಗಳು ಎಲ್ಲ ಮಾರ್ಗಗಳಲ್ಲಿಯೂ ಸಂಚರಿಸುತ್ತಿದ್ದವು. ಆದರೆ ಜನ ಸಂಚಾರ ಇಲ್ಲದೆ ಬಸ್‌ಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿರುವುದು ಕಂಡುಬಂತು. ಅದೇ ರೀತಿ ರಿಕ್ಷಾ, ಟ್ಯಾಕ್ಸಿಗಳು ಎಂದಿನಂತೆ ನಿಲ್ದಾಣಗಳಲ್ಲಿ ಬಾಡಿಗೆ ನಡೆಸಿದವು.
ತರಕಾರಿ, ಹಣ್ಣು, ದಿನಸಿ, ಸೂಪರ್ ಮಾರ್ಕೆಟ್, ಬೇಕರಿ, ಹೂವುವಿನ ಅಂಗಡಿಗಳು, ಪೆಟ್ರೋಲ್ ಬಂಕ್, ಮೆಡಿಕಲ್ ತೆರೆದಿದ್ದರೆ, ಮೊಬೈಲ್, ಇಲೆಕ್ಟ್ರಾನಿಕ್ಸ್, ಚಿನ್ನಾಭರಣ, ಬಟ್ಟೆ, ಚಪ್ಪಲಿ, ಹಾರ್ಡ್‌ವೇರ್ ಸೇರಿದಂತೆ ಇತರ ಅಂಗಡಿಗಳು ಬಂದ್ ಆಗಿದ್ದವು. ಹೂವು ಮಾರಾಟಗಾರರು ತರಿಸಿದ ಹೂವು ಗಳು ಸಂಜೆಯವರೆಗೂ ಮಾರಾಟವಾಗದೆ ತೊಂದರೆ ಅನುಭವಿಸಿದರು.
ಬ್ರಹ್ಮಾವರ, ಕುಂದಾಪುರ ಕೆಲವು ಅಂಗಡಿಗಳು ಅರ್ಧ ತೆರೆದು ವ್ಯಾಪಾರ ನಡೆಸುತ್ತಿರುವುದು ಕಂಡುಬಂದವು. ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ಅಂಗಡಿಗಳು ತೆರೆದಿದ್ದವು. ಅದೇರೀತಿ ಕೆಲವು ಅಂಗಡಿಗಳು ವ್ಯಾಪಾರ ಇಲ್ಲದೆ ಮಧ್ಯಾಹ್ನದ ವೇಳೆ ಬಂದ್ ಮಾಡಿತು. ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮ ಗಳು ಸರಾಗವಾಗಿ ನಡೆದವು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಗತ್ಯ ವಸ್ತುಗಳ ಸಾಗಾಟದ ವಾಹನಗಳು ಬಿಟ್ಟರೆ ಉಳಿದವುಗಳ ಓಡಾಟ ಡಿಮೆ ಸಂಖ್ಯೆಯಲ್ಲಿ ಕಂಡುಬಂದವು.
ನಗರದ ಕಲ್ಸಂಕ ಸೇರಿದಂತೆ ಜಿಲ್ಲೆಯ ಕೆಲವೆಡೆ ಪೊಲೀಸರು, ವಾಹನಗಳ ತಪಾಸಣಾ ಕಾರ್ಯವನ್ನು ನಡೆಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಮಣಿಪಾಲ, ಕುಕ್ಕಿಕಟ್ಟೆ, ಸಂತೆಕಟ್ಟೆ ಗಳಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದು.
ಸಿಬ್ಬಂದಿಗಳ ಕ್ರಿಕೆಟ್ ಆಟ, ಪ್ರಯಾಣಿಕರ ಪರದಾಟ!
ವಾರಾಂತ್ಯ ಕರ್ಫ್ಯೂನಲ್ಲಿ ಬಸ್‌ಗಳ ಸಂಚಾರ ಅವಕಾಶ ಇದ್ದರೂ ಪ್ರಯಾಣಿಕರಿಲ್ಲದೆ ಕೆಲವು ಸಿಟಿಬಸ್‌ಗಳು ನಿಲ್ದಾಣದಲ್ಲಿಯೇ ಉಳಿದುಕೊಂಡವು. ಈ ಹಿನ್ನೆಲೆ ಯಲ್ಲಿ ಈ ಬಸ್‌ಗಳ ಸಿಬ್ಬಂದಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿಯೇ ಕ್ರಿಕೆಟ್ ಆಡುವ ಮೂಲಕ ಟೈಮ್‌ಪಾಸ್ ಮಾಡಿದರು.
ಅದೇ ರೀತಿ ಪ್ರಯಾಣಿಕರಿಲ್ಲದ ಕಾರಣಕ್ಕೆ ಕೆಲವೊಂದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸದ ಪರಿಣಾಮ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಹುಬ್ಬಳ್ಳಿ, ಬೆಳಗಾಂ ಮಾರ್ಗದ ಕೆಲವೊಂದು ಬಸ್‌ಗಳು ಓಡಾಟ ನಡೆಸದ ಪರಿಣಾಮ ಪ್ರಯಾಣಿಕರು ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೇ ಗಂಟೆಗಟ್ಟಲೆ ಕಾಯುವಂತಾಯಿತು. ಇದರಿಂದ ಸರಕಾರದ ಈ ವಾರಾಂತ್ಯ ಕರ್ಫ್ಯೂ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
''ಸಾಮಾನ್ಯ ದಿನಗಳಲ್ಲಿ ಆಗುವ ಬಸ್ ಕಲೆಕ್ಷನ್, ಈ ಕರ್ಫ್ಯೂನಿಂದಾಗಿ ಆಗುತ್ತಿಲ್ಲ. ವಾರಕ್ಕೆ ಎರಡು ಬಾರಿ ಕರ್ಫ್ಯೂ ಮಾಡಿ ಯಾವುದೇ ಪ್ರಯೋಜನ ಇಲ್ಲ. ಕರ್ಫ್ಯೂ ಇಲ್ಲದಿದ್ದರೆ ಜನ ಯಾವುದೇ ಗುಂಪು ಸೇರದೆ ವಸ್ತುಗಳನ್ನು ಖರೀದಿಸುತ್ತಾರೆ. ಕರ್ಫ್ಯೂ ಮಾಡಿದರೆ ದಿನಸಿ, ತರಕಾರಿ ಅಂಗಡಿಗಳಲ್ಲಿ ಜನ ರಾಶಿ ಬಿದ್ದು ರೋಗ ಹರಡುವಂತಾಗುತ್ತದೆ. ಅದು ಬಿಟ್ಟರೆ ಕರ್ಫ್ಯೂ ನಿಂದ ಯಾರಿಗೂ ಯಾವುದೇ ಲಾಭ ಇಲ್ಲ''.
-ಕುಶಾ, ಖಾಸಗಿ ಬಸ್ ಸಿಬ್ಬಂದಿ, ಕುಂದಾಪುರ
''ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರ ತಪ್ಪು. ಬಸ್ ಇಲ್ಲದೆ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲಿ ಕೊರೋನಾ ಸಮಸ್ಯೆ ಇದೆಯೇ ಅಲ್ಲಿ ಮಾತ್ರ ಕರ್ಫ್ಯೂ ವಿಧಿಸಬೇಕು. ಅದು ಬಿಟ್ಟು ಎಲ್ಲ ಕಡೆ ಮಾಡಿದರೆ ಬಡವರು ಏನು ಮಾಡಬೇಕು''.
-ವೇದವ್ಯಾಸ, ಪ್ರಯಾಣಿಕ