ಯಾವುದೇ ಧರ್ಮ ದ್ವೇಷ, ಅಕ್ರಮವನ್ನು ಕಲಿಸುವುದಿಲ್ಲ : ಉಪಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ
ಮಂಗಳೂರು : ಯಾವುದೇ ಧರ್ಮವು ದ್ವೇಷ, ಅಕ್ರಮವನ್ನು ಕಲಿಸುವುದಿಲ್ಲ. ಜ್ಞಾನದ ಕೊರತೆ ಮಾತ್ರ ಪರಸ್ಪರ ದ್ವೇಷಕ್ಕೆ ಕಾರಣವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಎಚ್ಐಎಫ್ ಇಂಡಿಯಾ ವತಿಯಿಂದ ಎಚ್ಐಎಫ್ ಅಡಿಟೋರಿಯಂನಲ್ಲಿ ನಡೆದ 'ಪ್ರವಾದಿ ಮಹಮ್ಮದ್ (ಸ) ಜೀವನ ಮತ್ತು ಸಂದೇಶ, ಸಿರತ್ ಅಭಿಯಾನ' ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ಹೇಳಿದರು.
ನಂತರ ಮಾತನಾಡಿದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಹುಟ್ಟು ಸಾಮಾನ್ಯ ಮರಣದ ನಂತರ ನಮ್ಮನ್ನು ಹಾಗೂ ನಾವು ಮಾಡಿದಂತಹ ಒಳ್ಳೆಯ ಕಾರ್ಯಗಳನ್ನು ನೆನೆದು ನಮಗಾಗಿ ಪ್ರಾರ್ಥಿಸುವರು ಇರುವುದಾದರೆ ನಮ್ಮ ಜೀವನ ಸಾರ್ಥಕ. ಯಾವುದೇ ಧರ್ಮವು ದ್ವೇಷವನ್ನು, ಅಕ್ರಮವನ್ನು ಕಲಿಸುವುದಿಲ್ಲ. ಜ್ಞಾನದ ಕೊರತೆ ಮಾತ್ರ ಪರಸ್ಪರ ದ್ವೇಷಕ್ಕೆ ಕಾರಣವಾಗುತ್ತದೆ. "ರಬ್ಬಿ ಝಿದ್ನಿ ಇಲ್ಮ" ನನ್ನ ಜ್ಞಾನವನ್ನು ಹೆಚ್ಚಿಸು ಎಂಬ ಕುರ್ ಆನಿನ ವಾಕ್ಯವನ್ನು ನೆನಪಿಸಿದರು.
ಕೋವಿಡ್ ಸಂದರ್ಭದಲ್ಲಿ ಎಚ್ಐಎಫ್ ತಂಡ ಮಾಡಿದಂತಹ ಸಮಾಜಮುಖಿ ಕಾರ್ಯಗಳು ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.
ಪರಸ್ಪರ ಧರ್ಮಗಳು ಕಲಿಸಿಕೊಡುವ ಒಳ್ಳೆಯ ವಿಚಾರಗಳನ್ನು, ಒಳ್ಳೆಯ ಮಾತುಗಳನ್ನು, ಒಳ್ಳೆಯ ಸಭೆಗಳನ್ನು ನಾವು ಪ್ರಚಾರ ಪಡಿಸಬೇಕು ಹೊರತು, ಅಕ್ರಮಗಳು ಅನ್ಯಾಯಗಳು ದ್ವೇಷ ಭಾಷಣಗಳನ್ನು ಹೊಂದಿರುವಂತಹ ಪ್ರಚಾರಗಳನ್ನು ಕೈ ಬಿಡುವ ಮೂಲಕ ನಾವು ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದು ಮಸ್ಜಿದುಲ್ ಉದಾ ಮಸೀದಿಯ ಖತೀಬ್ ಮುಹಮ್ಮದ್ ಕುಂಞಿ ಅಭಿಪ್ರಾಯಪಟ್ಟರು.
ಮತ್ತೋರ್ವ ಮುಖ್ಯ ಅತಿಥಿ ಕಾರ್ಪೊರೇಟರ್ ನವೀನ್ ಡಿಸೋಜ ಉಪಸ್ಥಿತರಿದ್ದರು. ಎಚ್ಐಎಫ್ ಇಂಡಿಯಾ ಅಧ್ಯಕ್ಷ ನಾಝಿಮ್ ಎ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಜಿದ್ ಎ.ಕೆ. ಪ್ರಾಸ್ತಾವಿಕ ನುಡಿದರು. ದಿಷನ್ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿ, ರಿಝ್ವಾನ್ ಪಾಂಡೇಶ್ವರ ವಂದಿಸಿದರು.