ಉ.ಪ್ರ.ಸೇರಿದಂತೆ ಪಂಚರಾಜ್ಯಗಳಲ್ಲಿ ಚುನಾವಣೆ ಪ್ರಕಟ

Update: 2022-01-08 14:01 GMT

ಹೊಸದಿಲ್ಲಿ,ಜ.8: ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಚುನಾವಣಾ ಆಯೋಗವು ಶನಿವಾರ ಪ್ರಕಟಿಸಿದೆ. ಏಳು ಹಂತಗಳಲ್ಲಿ ಚುನಾವಣೆಗಳು ಜರುಗಲಿದ್ದು,ಫೆ.10ರಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ಎರಡನೇ ಹಂತದಲ್ಲಿ ಉ.ಪ್ರದೇಶ,ಪಂಜಾಬ್,ಉತ್ತರಾಖಂಡ ಮತ್ತು ಗೋವಾಗಳಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಫೆ.20 ಮತ್ತು ಫೆ.23ರಂದು ಉ.ಪ್ರದೇಶದಲ್ಲಿ ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಹಂತದ ಮತದಾನ ನಡೆಯಲಿವೆ. ಐದನೇ ಹಂತದಲ್ಲಿ ಫೆ.27ರಂದು ಮತ್ತು ಆರನೇ ಹಂತದಲ್ಲಿ ಮಾ.3ರಂದು ಉ.ಪ್ರದೇಶ ಮತ್ತು ಮಣಿಪುರದಲ್ಲಿ ಹಾಗೂ ಏಳನೇ ಹಂತದಲ್ಲಿ ಮಾ.7ರಂದು ಉ.ಪ್ರದೇಶದಲ್ಲಿ ಮತದಾನ ನಡೆಯಲಿವೆ.

ಚುನಾವಣಾ ಫಲಿತಾಂಶಗಳು ಮಾ.10ರಂದು ಪ್ರಕಟಗೊಳ್ಳಲಿವೆ.

ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ ಚಂದ್ರ ಅವರು,ಉ.ಪ್ರದೇಶದಲ್ಲಿ 403,ಪಂಜಾಬಿನಲ್ಲಿ 117,ಉತ್ತರಾಖಂಡದಲ್ಲಿ 70,ಮಣಿಪುರದಲ್ಲಿ 60 ಮತ್ತು ಗೋವಾದಲ್ಲಿ 40 ಸೇರಿದಂತೆ ಒಟ್ಟು 690 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಗಳು ನಡೆಯಲಿವೆ ಎಂದು ತಿಳಿಸಿದರು.

ದೇಶದಲ್ಲಿಯ ಕೋವಿಡ್-19 ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು,ವ್ಯಾಪಕ ಸಿದ್ಧತೆಗಳೊಂದಿಗೆ ಮತ್ತು ಮತದಾರರ ಗರಿಷ್ಠ ಪಾಲ್ಗೊಳ್ಳುವಿಕೆಯೊಂದಿಗೆ ಐದು ರಾಜ್ಯಗಳಲ್ಲಿ ಕೋವಿಡ್ ಸುರಕ್ಷಿತ ಚುನಾವಣೆಗಳನ್ನು ನಡೆಸುವುದು ನಮ್ಮ ಗುರಿಯಾಗಿದೆ ಎಂದ ಅವರು,8.5ಕೋ.ಗೂ ಅಧಿಕ ಮಹಿಳೆಯರು ಸೇರಿದಂತೆ ಪಂಚರಾಜ್ಯಗಳ 18 ಕೋ.ಗೂ ಅಧಿಕ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಎಲ್ಲ ಮತಗಟ್ಟೆಗಳನ್ನು ಸ್ಯಾನಿಟೈಸರ್‌ಗಳು ಮತ್ತು ಮಾಸ್ಕ್‌ಗಳು ಸೇರಿದಂತೆ ಕೋವಿಡ್ ಉಪಶಮನ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುವುದು. ಎಲ್ಲ ಮತಗಟ್ಟೆಗಳಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಬಳಸಲಾಗುವುದು. ಚುನಾವಣೆಗಳ ಸುಗಮ ನಿರ್ವಹಣೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಲಭ್ಯವಾಗಿಸಲು ಚುನಾವಣಾ ಆಯೋಗವು ಈಗಾಗಲೇ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಮತಗಟ್ಟೆಯನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ನಿರ್ವಹಿಸಲಿದ್ದಾರೆ ಎಂದು ಚಂದ್ರ ತಿಳಿಸಿದರು.

ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆಯನ್ನು ಬಹಿರಂಗಗೊಳಿಸುವುದು ಕಡ್ಡಾಯವಾಗಿದೆ. ಪಕ್ಷಗಳ ವೆಬ್‌ಸೈಟ್‌ಗಳು ತಮ್ಮ ಅಭ್ಯರ್ಥಿಗಳ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳನ್ನು ಸಂಪೂರ್ಣವಾಗಿ ಬಹಿರಂಗಗೊಳಿಸುವುದು ಅಗತ್ಯವಾಗಿದೆ ಎಂದರು.

ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ನಾಮಪತ್ರಗಳನ್ನು ಸಲ್ಲಿಸುವ ಆಯ್ಕೆಯನ್ನು ನೀಡಲಾಗುತ್ತದೆ ಎಂದೂ ಚಂದ್ರ ತಿಳಿಸಿದರು.

ಮಾದರಿ ನೀತಿ ಸಂಹಿತೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ವ್ಯಾಪಕ ವ್ಯವಸ್ಥೆಗಳನ್ನು ಮಾಡಿದ್ದು,ಅದು ತಕ್ಷಣದಿಂದಲೇ ಜಾರಿಗೆ ಬರುತ್ತದೆ. ನೀತಿ ಸಂಹಿತೆಯ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಣಬಲ ಮತ್ತು ಸರಕಾರಿ ಯಂತ್ರದ ದುರ್ಬಳಕೆಯ ಬಗ್ಗೆ ಆಯೋಗವು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ನೀತಿ ಸಂಹಿತೆಯ ಉಲ್ಲಂಘನೆ,ಹಣ ಮತ್ತು ಉಡುಗೊರೆಗಳ ವಿತರಣೆಗಳ ಯಾವುದೇ ಘಟನೆಯನ್ನು ವರದಿ ಮಾಡಲು ಮತದಾರರು ನಮ್ಮ ಸಿ-ವಿಜಿಲ್ ಅರ್ಜಿ ನಮೂನೆಯನ್ನು ಬಳಸಬೇಕು. ದೂರು ಸ್ವೀಕರಿಸಿದ 100 ನಿಮಿಷಗಳಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಅಪರಾಧ ಸ್ಥಳವನ್ನು ತಲುಪುತ್ತಾರೆ ಎಂದು ಅವರು ವಿವರಿಸಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ,ತಜ್ಞರು ಮತ್ತು ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಸರಣಿ ಸಭೆಗಳ ಬಳಿಕ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ,ವಿಕಲಾಂಗರಿಗೆ ಮತ್ತು ಕೋವಿಡ್ ರೋಗಿಗಳಿಗೆ ಅಂಚೆ ಮೂಲಕ ಮತ ಚಲಾವಣೆಗೆ ಅವಕಾಶ ನೀಡಲು ನಿರ್ಧರಿಸಿದೆ.

ಸೇವಾ ಮತದಾರರು ಸೇರಿದಂತೆ ಒಟ್ಟು 18.34 ಕೋ.ಮತದಾರರು ಚುನಾವಣೆಗಳಲ್ಲಿ ಭಾಗಿಯಾಗಲಿದ್ದು,ಮಹಿಳಾ ಮತದಾರರ ಸಂಖ್ಯೆ 8.55 ಕೋ.ಆಗಿದೆ. ಉ.ಪ್ರ.ಸೇರಿದಂತೆ ಐದು ರಾಜ್ಯಗಳಲ್ಲಿ ಸುಮಾರು 24.9 ಲ.ಮತದಾರರು ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

ಪ್ರಚಲಿತ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮುಂಚೂಣಿಯ ಕಾರ್ಯಕರ್ತರೆಂದು ಪರಿಗಣಿಸಲಾಗುವುದು ಮತ್ತು ಎಲ್ಲ ಅರ್ಹ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಲಸಿಕೆ ಡೋಸ್ ನೀಡಲಾಗುವುದು ಎಂದು ಚಂದ್ರ ತಿಳಿಸಿದರು.

ಜ.15ರವರೆಗೆ ರಾಜಕೀಯ ಪಕ್ಷಗಳು ಅಥವಾ ಸಂಭಾವ್ಯ ಅಭ್ಯರ್ಥಿಗಳು ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಗುಂಪುಗಳಿಂದ ಭೌತಿಕ ರ್ಯಾಲಿಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಂತರ ಚುನಾವಣಾ ಆಯೋಗವು ಪರಿಸ್ಥಿತಿಯನ್ನು ಪುನರ್ಪರಿಶೀಲಿಸಿ,ಮುಂದಿನ ನಿರ್ದೇಶಗಳನ್ನು ಹೊರಡಿಸಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News