×
Ad

ನಕಲಿ, ಪ್ರಚೋದನಾತ್ಮಕ ಪೋಸ್ಟ್ ಮಾಡುತ್ತಿದ್ದ ಹಲವು ಸೋಶಿಯಲ್ ಮೀಡಿಯಾ ಖಾತೆಗಳನ್ನು ಬ್ಲಾಕ್ ಮಾಡಿದ ಸರಕಾರ

Update: 2022-01-08 18:43 IST

ಹೊಸದಿಲ್ಲಿ: ಟ್ವಿಟ್ಟರ್, ಯುಟ್ಯೂಬ್, ಫೇಸ್ಬುಕ್‍ನಲ್ಲಿ ನಕಲಿ ಮತ್ತು ಪ್ರಚೋದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದ ಹಲವಾರು ಸಾಮಾಜಿಕ ಜಾಲತಾಣ ಹ್ಯಾಂಡಲ್‍ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಇಂದು ಹೇಳಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಖಾತೆಗಳ ಮಾಲಕರುಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬ್ಲಾಕ್ ಮಾಡಲಾದ ಖಾತೆಗಳು ಕ್ಯಾಬಿನೆಟ್ ಸಭೆ ಕುರಿತ ಮಾಹಿತಿ ನೀಡುವ ನಕಲಿ ವೀಡಿಯೋ, ಪ್ರಧಾನಿಯ ವಿರುದ್ಧ ಹಿಂಸೆಯನ್ನು ತೋರಿಸುವ ನಕಲಿ ಅನಿಮೇಟೆಡ್ ವೀಡಿಯೋ ಹಾಗೂ  ಹಿಂದು ಮಹಿಳೆಯರನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಖಾತೆಗಳು ಸೇರಿವೆ ಎಂದು ಸಚಿವರು ಹೇಳಿದ್ದಾರೆ. ಈ ಕುರಿತು ಸಚಿವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯನ್ನು ತೋರಿಸುವ ಹಿಂಸಾತ್ಮಕ ವೀಡಿಯೋದ ಸೃಷ್ಟಿಕರ್ತರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಟ್ವೀಟ್‍ಗೆ  ಸಚಿವರು ಪ್ರತಿಕ್ರಿಯಿಸಿದ್ದರು. ಈ ನಿರ್ದಿಷ್ಟ ವೀಡಿಯೋ ಡಿಸೆಂಬರ್ 2020ರಿಂದ ಹರಿದಾಡುತ್ತಿದೆ.

ಸರಕಾರ ಒಟ್ಟು 73 ಟ್ವಿಟ್ಟರ್ ಹ್ಯಾಂಡಲ್‍ಗಳನ್ನು, 4 ಯುಟ್ಯೂಬ್ ವೀಡಿಯೋಗಳನ್ನು ಹಾಗೂ ಒಂದು ಇನ್‍ಸ್ಟಾಗ್ರಾಂ ಗೇಮ್ ಅನ್ನು ತೆಗೆದುಹಾಕಿದೆ. ಕ್ಯಾಬಿನೆಟ್ ಸಮಿತಿ ಸಭೆಯ ತಿರುಚಲಾದ ವೀಡಿಯೋವೊಂದರಲ್ಲಿ ಈ ಸಭೆ ಸಿಖ್ ಸಮುದಾಯದ ವಿರುದ್ಧ ಎಂದು ಬಿಂಬಿಸುವ ಯತ್ನದ ಬಗ್ಗೆ ದಿಲ್ಲಿ ಪೊಲೀಸರು ಪ್ರಕರಣ ಕೂಡ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News