ಕುಂದಾಪುರದಲ್ಲಿ ವಾರಾಂತ್ಯ ಕರ್ಫ್ಯೂಗೆ ನೀರಸ ಪ್ರತಿಕ್ರಿಯೆ

Update: 2022-01-08 13:47 GMT

ಕುಂದಾಪುರ, ಜ.8: ವಾರಾಂತ್ಯ ಕರ್ಫ್ಯೂಗೆ ಕುಂದಾಪುರ ತಾಲೂಕಿನಲ್ಲಿ ನಿರಾಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ಫ್ಯೂ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದ ರಿಂದ ಜನರು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರವು ಈ ಅವೈಜ್ಞಾನಿಕ ಕರ್ಫ್ಯೂನಿಂದಾಗಿ ಜನರನ್ನು ಚಿತ್ರಹಿಂಸೆ ನೀಡಿ ಕೊಲ್ಲುತ್ತಿದೆ. ಸರಕಾರವು ಶೇ.50ರಷ್ಟು ಜನ ಮನೆಯಲ್ಲಿ ಇರಿ, ಉಳಿದವರು ಮಾತ್ರ ಕೆಲಸ ಮಾಡಿ ಎಂದು ಅವೈಜ್ಞಾನಿಕವಾಗಿ ಹೇಳುತ್ತಿದೆ. ಇದರಿಂದ ಜನ ಸಾಮಾನ್ಯರು ಬದುಕು ನಡೆಸುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ನಾವು ಕಳೆದೆರಡು ಬಾರಿಯ ಲಾಕ್‌ಡೌನ್‌ಯಿಂದಾಗಿ ಇನ್ನು ಚೇತರಿಸದೆ ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸಹ ಸರಕಾರ ಯಾವುದೇ ತೆರಿಗೆ ಕಡಿಮೆ ಮಾಡಿಲ್ಲ. ಮುಂದೆ ಇದೇ ರೀತಿಯಾದರೆ ಕೊರೋನದಿಂದ ಜನ ಸಾಯುವ ಬದಲು, ಸರಕಾರದ ನಿರ್ಲಕ್ಷದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ವಾರದ ಸಂತೆ ಇಲ್ಲ

ಹೊಸ ಮಾರ್ಗಸೂಚಿ ಪ್ರಕಾರ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ಕುಂದಾಪುರದ ಶನಿವಾರ ಸಂತೆ ಇರಲಿಲ್ಲ. ಮುಂಜಾನೆ ವೇಳೆ ಒಂದಷ್ಟು ವ್ಯಾಪಾರಸ್ಥರು ಆಗಮಿಸಿದರೂ ಕೂಡ ಅದಕ್ಕೆ ಅವಕಾಶ ನೀಡಲಾಗಿಲ್ಲ.

ಸಂಗಮ್ ಜಂಕ್ಷನ್, ಸಂತೆ ಮಾರುಕಟ್ಟೆ ಹಿಂಭಾಗದ ರಸ್ತೆ ಸಮೀಪ ತರಕಾರಿ, ಹಣ್ಣು ಮಾರಾಟ ನಡೆದಿದ್ದು ಗ್ರಾಹಕರು ಕೊಂಡುಕೊಳ್ಳುವ ದೃಶ್ಯ ಕಂಡುಬಂತು. ಕುಂದಾಪುರ ಹೂವಿನ ಮಾರುಕಟ್ಟೆ ತೆರೆದಿದ್ದರೂ ಕೂಡ ಗ್ರಾಹಕರು ಇರಲಿಲ್ಲ. ಕುಂದಾಪುರ ನಗರದ ಶಾಸ್ತ್ರಿವೃತ್ತ ಸಹಿತ ಕೆಲವೆಡೆ ಪೊಲೀಸರು, ವಾಹನಗಳ ತಪಾಸಣಾ ಕಾರ್ಯವನ್ನು ನಡೆಸಿದರು.

ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು, ಡಿವೈಎಸ್ಪಿಶ್ರೀಕಾಂತ್ ಕೆ. ನಗರದ ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಹಾಗೂ ಪುರಸಭೆ ವತಿಯಿಂದ ಮೈಕ್ ಮೂಲಕ ಕೋವಿಡ್ ಜಾಗೃತಿ, ನಿಯಮಾವಳಿ ಪಾಲನೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News