ಜಾರ್ಖಂಡ್: ಬಿಜೆಪಿ ಕಾರ್ಯಕರ್ತರಿಂದ ವ್ಯಕ್ತಿಗೆ ಹಲ್ಲೆ; ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತ

Update: 2022-01-08 16:14 GMT

ರಾಂಚಿ, ಜ. 7: ಬಿಜೆಪಿ ಕಾರ್ಯಕರ್ತರು ಮುಸ್ಲಿಂ ವ್ಯಕ್ತಿಯೋರ್ವನಿಗೆ ಥಳಿಸಿದ, ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬಲವಂತಪಡಿಸಿದ ಹಾಗೂ ಆತನ ಉಗುಳನ್ನೇ ನೆಕ್ಕುವಂತೆ ಮಾಡಿದ ಘಟನೆ ಜಾರ್ಖಂಡ್ನ ಧನ್ಬಾದ್ ನಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ವೈರಲ್ ಆದ ಬಳಿಕ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಟ್ವೀಟ್ ಮಾಡಿ, ಘಟನೆಯ ಕುರಿತು ತನಿಖೆ ನಡೆಸುವಂತೆ ಹಾಗೂ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಪಂಜಾಬ್ನಲ್ಲಿ ಈ ವಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಾಹನ ವ್ಯೂಹಕ್ಕೆ ಭದ್ರತಾ ಲೋಪ ಸಂಭವಿಸಿರುವುದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಆಯೋಜಿಸಿದ್ದ ಪ್ರತಿಭಟನೆ ಸಂದರ್ಭ ಈ ಘಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಬಿಜೆಪಿಯ ಧನ್ಬಾದ್ ಶಾಸಕ ಹಾಗೂ ಸಂಸದ ಕೂಡ ಪಾಲ್ಗೊಂಡಿದ್ದರು. ಬಿಜೆಪಿ ಕಾರ್ಯಕರ್ತರಿಂದ ಥಳಿತಕ್ಕೊಳಗಾದ ವ್ಯಕ್ತಿಯನ್ನು 32 ವರ್ಷದ ಝಿಶಾನ್ ಖಾನ್ ಎಂದು ಗುರುತಿಸಲಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಖಾನ್ ಅವರು ಪ್ರತಿಭಟನಾ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದರು. ಈ ಸಂದರ್ಭ ಬಿಜೆಪಿಯ ರಾಜ್ಯ ವರಿಷ್ಠ ದೀಪಕ್ ಪ್ರಕಾಶ್ ಅವರು ಖಾನ್ ರನ್ನು ನಿಂದಿಸಿದ್ದಾರೆ. ಅನಂತರ ಗುಂಪು ಖಾನ್ ಮೇಲೆ ಹಲ್ಲೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಝಿಶಾನ್ ಖಾನ್ ಸಹೋದರ ರೆಹಾನ್ ಖಾನ್ ದೂರು ಸಲ್ಲಿಸಿದ ಬಳಿಕ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ, ತನ್ನ ಸಹೋದರ ಮಾನಸಿಕ ಅನಾರೋಗ್ಯದ ಹಿನ್ನೆಲೆಯಲ್ಲಿ 2012ರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ. ಘಟನೆಯ ಕುರಿತು ತಿಳಿದ ಬಳಿಕ ಎಫ್ಐಆರ್ ದಾಖಲಿಸಲು ತಾನು ರೆಹಮಾನ್ ಖಾನ್ ಗೆ ನೆರವು ನೀಡಿದೆ ಎಂದು ಕಾಂಗ್ರೆಸ್ ನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಶಂಶೀರ್ ಅಲಂ ಅವರು ಹೇಳಿದ್ದಾರೆ. ಅಲ್ಪಸಂಖ್ಯಾತರ ಸಮುದಾಯದ ವ್ಯಕ್ತಿಗಳ ವಿರುದ್ಧ ಇಂತಹ ಹಲ್ಲೆ ನಡೆಸುವವರನ್ನು ನಾವು ಶಿಕ್ಷಿಸದೆ ಬಿಡುವುದಿಲ್ಲ. ನಾವು ಈ ಘಟನೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News