ಕಾಪು ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Update: 2022-01-09 05:01 GMT

ಕಾಪು: ಜಮೀಯ್ಯತುಲ್ ಫಲಾಹ್ ಕಾಪು ಸಂಸ್ಥೆ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಕಾಪುವಿನಲ್ಲಿರುವ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಧ್ಯಕ್ಷರಾದ ಶಬೀ ಅಹ್ಮದ್ ಕಾಝಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಂತರ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಯಿಂದ ತಮ್ಮ ವಿದ್ಯಾಭ್ಯಾಸ ಕೊನೆಗೊಳಿಸಬಾರದು ಎಂಬ ನಿಟ್ಟಿನಲ್ಲಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಸುಮಾರು 34 ವರ್ಷಗಳಿಂದ ಝಕಾತ್ ನ ಹಣ ಸಂಗ್ರಹಿಸಿ ಅದನ್ನು ಝಕಾತ್ ಪಡೆಯಲು ಅರ್ಹರಾದ ಸಮುದಾಯದ ವಿದ್ಯಾರ್ಥಿಗಳಿಗೆ ವಿತರಿಸುತ್ತಿದೆ ಹಾಗೂ ಇತರ ಸಮುದಾಯದ ವಿದ್ಯಾರ್ಥಿಗಳಿಗೂ ದಾನಿಗಳಿಂದ ದೇಣಿಗೆ ಪಡೆದು ವಿತರಿಸುತ್ತಿದೆ.

ಇದರ ಫಲಾನುಭವಿಗಳು ಇಂದು ಸಮಾಜದಲ್ಲಿ  ಇಂಜಿನಿಯರ್, ಡಾಕ್ಟರ್, ಕಂಟ್ರಾಕ್ಟರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಲ್ಲದೇ ಬಡ ರೋಗಿಗಳ ಚಿಕಿತ್ಸೆಗಾಗಿ ಕೂಡಾ ಈ ಸಂಸ್ಥೆ ಗಣನೀಯ ಕೊಡುಗೆ ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ.

ಮಂಗಳೂರು ಮತ್ತು ಉಡುಪಿಯ ಆಸ್ಪತ್ರೆಗಳಿಗೆ 10 ಡಯಾಲಿಸೀಸ್ ಯಂತ್ರಗಳನ್ನು ಕೊಟ್ಟಿದೆ. ಈ ವರ್ಷದಲ್ಲಿ ಕಾಪು ಘಟಕದಲ್ಲಿ  1.45 ಲಕ್ಷ ರೂ. ಎನ್.ಆರ್.ಸಿ.ಸಿ.ಯ ಸಹಕಾರದೊಂದಿಗೆ ವಿತರಿಸುವ ಕಾರ್ಯಕ್ರಮ ಇಂದಿನದ್ದಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್.ಆರ್.ಸಿ.ಸಿ. ಜಿದ್ದಾ ಘಟಕದ ಪ್ರತಿನಿಧಿ ಮೊಹಿದೀನ್ ಅಹ್ಮದ್, ಉಡುಪಿ ಘಟಕದ ಅಧ್ಯಕ್ಷರಾದ ಕಾಸಿಮ್ ಬಾರ್ಕುರ್, ಕಾಪು ಘಟಕದ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್, ಸದಸ್ಯರಾದ ನಸೀರ್ ಅಹ್ಮದ್ ಎಕ್ಕಾವನ್, ಇಬ್ರಾಹೀಮ್ ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.

ಕಾರ್ಯಕ್ರಮವು  ವಿದ್ಯಾರ್ಥಿ ಅನೀಸ್ ಅವರ ಕುರ್ ಆನ್ ಪಠಣದೊಂದಿಗೆ  ಪ್ರಾರಂಭವಾಯಿತು. ಕಾಪು ಘಟಕದ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು. ಸಂಸ್ಥೆಯ ಪತ್ರಿಕಾ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು. ಸಫಾಫ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News