'ಶೀಘ್ರವೇ ಭೇಟಿಯಾಗೋಣ': ದಯಾಮರಣದಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕೊನೆಯ ಸಂದೇಶ
ಕೊಲಂಬಿಯಾ: ದೀರ್ಘಕಾಲೀನ ಅನಾರೋಗ್ಯದಿಂದ ದಣಿದ ಲ್ಯಾಟಿನ್ ಅಮೆರಿಕಾ ಮೂಲದ ವಿಕ್ಟರ್ ಎಸ್ಕೊಬಾರ್ ಕೊನೆಗೂ ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡಿದ್ದಾರೆ. ವಿಕ್ಟರ್ ದಯಾಮರಣಕ್ಕೆ ಅವಕಾಶ ಕೋರಿಕೊಂಡಿದ್ದರು. ಆದರೆ ಅಲ್ಲಿನ ಕಾನೂನು ಪ್ರಕಾರ ದಯಾಮರಣ ನಿಷೇಧಿಸಿರುವುದರಿಂದ ಗೌರವಯುತವಾಗಿ ಸಾಯುವ ತನ್ನಿಚ್ಚೆಯನ್ನು ಮೊಟಕುಗೊಳಿಸಲಾಗಿದೆ ಎಂದು ಅವರು ನ್ಯಾಯಾಲಯ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ, ಕೊಲಂಬಿಯಾ ಕೋರ್ಟ್ ಗೌರವಯುತವಾಗಿ ಸಾಯುವ ಅವಕಾಶವನ್ನು ಎತ್ತಿ ಹಿಡಿದಿದೆ. ಹಾಗಾಗಿ, ಜನವರಿ 7 ರಂದು ಸಾಯುವ ನಿರ್ಧಾರವನ್ನು ವಿಕ್ಟರ್ ಎಸ್ಕೊಬಾರ್ ಮಾಡಿದ್ದರು.
ದೀರ್ಘ ಕಾಲದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ವಿಕ್ಟರ್ ಸಿಲಿಂಡರ್ ಸಹಾಯದಿಂದ ಕೃತಕವಾಗಿ ಉಸಿರಾಡುತ್ತಿದ್ದರು. ಅದು ಮಾತ್ರವಲ್ಲದೆ ಹೃದಯ ಸಂಬಂಧಿ ಇತೆರ ಕಾಯಿಲೆ ಹಾಗೂ ಡಯಾಬಿಟೀಸ್‌ನಿಂದಾಗಿ ಸ್ವಾಧೀನ ಕಳೆದುಕೊಂಡಿದ್ದ ವಿಕ್ಟರ್ ಗೆ ದಯಾಮರಣ ನೀಡುವುದನ್ನು ಅವರ ಕುಟುಂಬ ಕೂಡಾ ಬೆಂಬಲಿಸಿತ್ತು.
ರೋಮನ್ ಕ್ಯಾಥೋಲಿಕ್ ಪ್ರಭಾವ ಹೆಚ್ಚಿರುವ ಲ್ಯಾಟಿನ್ ಅಮೆರಿಕಾದಲ್ಲಿ ದಯಾಮರಣವನ್ನು ಚರ್ಚ್ ನಿಷೇಧಿಸಿತ್ತು. ದಯಾಮರಣವನ್ನು ಆತ್ಮಹತ್ಯೆಯಂತೆ ಪರಿಗಣಿಸಿ ಆ ಅವಕಾಶವನ್ನು ನಿರಾಕರಿಸಲಾಗಿತ್ತು. ಆದರೆ, ಅತೀವ ನೋವಿನಿಂದ ಬಳಲುತ್ತಿದ್ದ ವಿಕ್ಟರ್ ತನಗೆ ಈ ನೋವಿನಿಂದ ಮುಕ್ತಿ ನೀಡಬೇಕೆಂದೂ, ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಕೊಲಂಬಿಯಾದ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ವಿಕ್ಟರ್ ಅವರ ಮನವಿಯನ್ನು ಪುರಸ್ಕರಿಸಿತ್ತು. ಅದರಂತೆ 1997 ರಲ್ಲಿ ನಿಷೇಧಿಸಲಾಗಿದ್ದ ದಯಾಮರಣವನ್ನು 2021 ರ ಜುಲೈನಲ್ಲಿ ಮರು ಅವಕಾಶ ಮಾಡಿಕೊಡಲಾಯಿತು.
ಕೋರ್ಟ್ ತೀರ್ಪು ಆಧಾರದ ಮೇಲೆ ದಯಾಮರಣದ ಅವಕಾಶವನ್ನು ಪಡೆದುಕೊಂಡ ವಿಕ್ಟರ್, ಜನವರಿ 7 ರಂದು ಸಾಯಲು ನಿರ್ಧರಿಸಿದ್ದಾರೆ. ಸಾಯುವ ಮೊದಲು ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು, ʼಎಲ್ಲರೂ ಒಂದಲ್ಲ ಒಂದು ದಿನ ಸಾಯಬೇಕು. ನಾನು ನಿಮಗೆಲ್ಲಾ ಅಂತಿಮ ವಿದಾಯ ಹೇಳುವುದಿಲ್ಲ, ಶೀಘ್ರವೇ ಮತ್ತೆ ಭೇಟಿಯಾಗೋಣ” ಎಂದು ಹೇಳಿದ್ದಾರೆ.