×
Ad

ಪರ್ಯಾಯ ಮೆರವಣಿಗೆ: ನೈಟ್ ಕರ್ಫ್ಯೂನಿಂದ ವಿನಾಯಿತಿಗೆ ಮನವಿ

Update: 2022-01-09 19:42 IST

ಉಡುಪಿ, ಜ.9: ಪರ್ಯಾಯ ಮಹೋತ್ಸವದ ಜ.17 ರಾತ್ರಿಯಿಂದ ಜ.18 ರಾತ್ರಿಯವರೆಗಿನ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸುವ ಬಗ್ಗೆ ಕೋವಿಡ್ ನಿಯಾಮಾವಳಿ ಹಾಗೂ ನೈಟ್ ಕರ್ಫ್ಯೂನಿಂದ ವಿನಾಯಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಪರ್ಯಾಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ಕೃಷ್ಣಾಪುರ ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.18ರಂದು ಬೆಳಗಿನ ಜಾವ 2 ಗಂಟೆಯಿಂದ ನಡೆಯುವ ಪರ್ಯಾಯ ಮೆರವಣಿಗೆ, ಸರ್ವಜ್ಞ ಪೀಠಾ ರೋಹಣ, ಅಕ್ಷಯ ಪಾತ್ರೆ ಹಸ್ತಾಂತರ, ಅರಳುಗದ್ದಿಗೆ ಮತ್ತು ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಸಭೆಗಳನ್ನೂ ತೀರಾ ಮುಂಜಾಗರೂತೆಯ ಕ್ರಮಗಳೊಂದಿಗೆ ಸರಳವಾಗಿ ನಡೆಸಲಾಗುವುದು. ಮೆರವಣಿಗೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಟ್ಯಾಬ್ಲೋಗಳು ಇರುತ್ತವೆ ಎಂದರು.

ಬೆಳಗಿನ ಜಾವ 5ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಬೆಳಗಿನ ಜಾವ ಎರಡು ಗಂಟೆಗೆ ನಡೆಯುವ ಪರ್ಯಾಯ ಮೆರವಣಿಗೆಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಜೊತೆ ಚರ್ಚಿಸಿ ಸರಕಾರಕ್ಕೆ ಮನವಿ ಮಾಡಲಾಗುವುದು. ಈ ಬಗ್ಗೆ ರಾಜ್ಯ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಆ ನಿರ್ಧಾರಕ್ಕೆ ಪರ್ಯಾಯೋತ್ಸವ ಸಮಿತಿ ಮತ್ತು ಸ್ವಾಮೀಜಿ ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದರು.

ಜ.17ರಂದು ರಾತ್ರಿ ಕೃಷ್ಣಾಪುರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಪರ್ಯಾಯ ಅದಮಾರು ಸ್ವಾಮೀಜಿಯವರಿಗೆ ನಡೆಯುವ ಅಭಿನಂದನಾ ಕಾರ್ಯಕ್ರಮವನ್ನು ರಥಬೀದಿಗೆ ಬದಲಾಗಿ ರಾಜಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಜ.10ರಿಂದ 17ರ ತನಕ ಸಂಜೆ ಪ್ರತಿನಿತ್ಯ ರಥಬೀದಿಯ ವೇದಿಕೆಯಲ್ಲಿ ಸ್ಥಳೀಯ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 17ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ 10ಗಂಟೆಯೊಳಗೆ ಮುಗಿಸಲಾಗುವುದು. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜ.15 ಮತ್ತು 16ರ ರಥಬೀದಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದ್ದುಪಡಿಸಲಾಗಿದೆ ಎಂದರು.

ಜ.18 ಮಧ್ಯಾಹ್ನ ಕೊರೊನಾ ಮಾರ್ಗಸೂಚಿ ನಿಯಮ ಅನುಸರಿಸಿಕೊಂಡು ಭಕ್ತಾದಿಗಳಿಗೆ ಕೃಷ್ಣ ಪ್ರಸಾದ ಅನ್ನಸಂತರ್ಪಣೆ ಇರುತ್ತದೆ. ಜ.18ರಿಂದ ಜ.22ರ ವರೆಗೆ ಪ್ರತಿನಿತ್ಯ ಸಂಜೆ ರಾಜಾಂಗಣದಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಮತ್ತು ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜ.22 ರಂದು ನಡೆಯಬೇಕಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಜ.24ರಂದು ನಡೆಸಲಾಗುವುದುಎಂದು ರಘುಪತಿ ಭಟ್ ಹೇಳಿದರು.

ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ ಜ.17ರಂದು ರಾತ್ರಿ ನಗರಾ ದ್ಯಂತ ನಡೆಯುವ ಖಾಸಗಿ ಮನರಂಜನಾ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದು ಜಿಲ್ಲಾಡಳಿತಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News