×
Ad

ದ.ಕ.ಜಿಲ್ಲಾ ಡಿಡಿಪಿಐಗೆ ರಾಜ್ಯ ಎಸ್‌ಡಿಎಂಸಿ ಮನವಿ

Update: 2022-01-10 20:18 IST

ಮಂಗಳೂರು, ಜ.10: ಸರಕಾರಿ ಶಾಲೆಗಳು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವಂತೆ ದ.ಕ.ಜಿಲ್ಲೆಯ ನೂತನ ಡಿಡಿಪಿಐ ಸುಧಾಕರ್ ಅವರಿಗೆ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ನಿಯೋಗವು ಸೋಮವಾರ ಮನವಿ ಸಲ್ಲಿಸಿದೆ.

ಎಸ್‌ಡಿಎಂಸಿ ಸಭೆಗಳಲ್ಲಿ ಬಹುಮತದ ನಿರ್ಣಯಗಳನ್ನು ಮುಂದಿನ ಸಭೆಯ ಮುಂಚಿತವಾಗಿ ಅನುಪಾಲನೆ ಮಾಡಲು ಶಾಲೆಗಳ ಸದಸ್ಯ ಕಾರ್ಯದರ್ಶಿಗಳಿಗೆ ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಬೇಕು. ಪ್ರೌಢಶಾಲೆಗಳಲ್ಲಿ ಎಸ್‌ಡಿಎಂಸಿ ಅಧ್ಯಕ್ಷರನ್ನು ಪೋಷಕರಿಂದ ಆಯ್ಕೆ ಆದಂತಹ 9 ಜನ ಸದಸ್ಯರಿಂದ ಆಯ್ಕೆ ಮಾಡುವ ಬಗ್ಗೆ ವರ್ಷದ ಹಿಂದೆ ಆದೇಶ ಬಂದಿದ್ದರೂ ಕೂಡ ಹೆಚ್ಚಿನ ಪ್ರೌಢಶಾಲೆಗಳಲ್ಲಿ ಅದನ್ನು ಪಾಲಿಸಲಿಲ್ಲ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಸರಕಾರದ ಆದೇಶವನ್ನು ಉಲ್ಲಂಘಿಸಿ ಶಾಲೆಗಳ ಅನುದಾನಗಳನ್ನು ಬಳಕೆ ಮಾಡುತ್ತಿದ್ದು ಅಂತಹ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಜರಗಿಸಬೇಕು. ಅತಿಥಿ ಶಿಕ್ಷಕರ ಆಯ್ಕೆಯ ವಿಷಯವನ್ನು ಎಸ್‌ಡಿಎಂಸಿಯ ಗಮನಕ್ಕೆ ತರಬೇಕು. ಶಿಕ್ಷಕರ ಕೊರತೆಯನ್ನು ನೀಗಿಸಬೇಕು.

ಕೊರೋನದಿಂದ 2 ವರ್ಷದಿಂದ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣದ ಕೊರತೆ ಕಾಡುತ್ತಿದ್ದು, ಈ ಸಮಯದಲ್ಲಿ ಎನ್‌ಜಿಒಗಳಿಗೆ ಯಾವುದೇ ರೀತಿಯ ಕಾರ್ಯಕ್ರಮ ಮಾಡಲು ಸರಕಾರಿ ಶಾಲೆಗಳಲ್ಲಿ ಅವಕಾಶವನ್ನು ಕೊಡದಂತೆ ಆದೇಶಿಸಬೇಕು ಎಂದು ಮನವಿ ಮಾಡಿದೆ.

ಎಸ್‌ಡಿಎಂಸಿ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ, ರಾಮಚಂದ್ರ ಸುಳ್ಯ, ದಯಾನಂದ ಶೆಟ್ಟಿ, ಖೈರುನ್ನಿಸಾ, ಶಹನಾಝ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News