ಉಪ್ಪಿನಂಗಡಿ: ಗ್ರಾ.ಪಂ. ಸದಸ್ಯನಿಂದ ಸಾರ್ವಜನಿಕ ಬಾವಿ ಸ್ವಚ್ಛತೆ

Update: 2022-01-10 15:07 GMT

ಉಪ್ಪಿನಂಗಡಿ: ಸಮಾಜಕ್ಕೆ ಉಪಕಾರವಾಗಬೇಕೆಂಬ ಇಚ್ಚಾ ಶಕ್ತಿಯಿಂದ ಜನಪ್ರತಿನಿಧಿಯಾದರೂ ಗತ್ತು ಗೌರವಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡಬಹುದೆನ್ನುವುದನ್ನು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರೋರ್ವರು ಸಾರ್ವಜನಿಕ ಬಾವಿಗಿಳಿದು ಸ್ವಚ್ಛ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ.

ಅವರ ಹೆಸರು ಸಣ್ಣಣ್ಣ  ಯಾನೆ ಸಂಜೀವ ಮಡಿವಾಳ. ಉಪ್ಪಿನಂಗಡಿ ಗ್ರಾಮದ ಎರಡನೇ ವಾರ್ಡಿನ ಸದಸ್ಯ. ಉಪ್ಪಿನಂಗಡಿ ಒಂದನೇ ವಾರ್ಡಿನಲ್ಲಿನ ಬ್ಯಾಂಕ್ ರಸ್ತೆಯಲ್ಲಿದ್ದ ಸಾರ್ವಜನಿಕ ಬಾವಿಯಲ್ಲಿ  ಶುದ್ಧ  ನೀರಿದ್ದರೂ  ಬಾವಿಯಲ್ಲಿ ಬೆಳೆದ ಗಿಡಗಂಟಿಗಳಿಂದಾಗಿ ನೀರು ಬಳಕೆಯಾಗುತ್ತಿರಲಿಲ್ಲ.  ಈ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ ಭಟ್ ಬಾವಿ ಸ್ವಚ್ಚತೆಯ ಅಗತ್ಯವನ್ನು ಪಂಚಾಯತ್ ಸದಸ್ಯರಿಗೆ ಮನವರಿಕೆ ಮಾಡಿದ್ದರು. ತಕ್ಷಣವೇ ಸ್ಪಂದಿಸಿದ ಸ್ಥಳೀಯ ಪಂಚಾಯತ್ ಸದಸ್ಯರು ಪಂಚಾಯತ್ ಸ್ವಚ್ಚತಾ  ಸಿಬ್ಬಂದಿಗಯೊಂದಿಗೆ ಬಾವಿಯ ಬಳಿಗೆ ಬಂದರಾದರೂ ಸ್ವಚ್ಚತಾ ಸಿಬ್ಬಂದಿಗೆ ಬಾವಿಯೊಳಗೆ ಇಳಿದು ಕಾರ್ಯ ನಿರ್ವಹಿಸುವ ಕೌಶಲ್ಯ  ಇರಲಿಲ್ಲ. ಈ ವೇಳೆ  ಸ್ಥಳದಲ್ಲಿದ್ದ ಎರಡನೇ ವಾರ್ಡ್ ಸದಸ್ಯ ಸಣ್ಣಣ್ಣ ತನ್ನ ಶರ್ಟ್ ಕಳಚಿಟ್ಟು ಹಗ್ಗದ ಸಹಾಯದಿಂದ ಬಾವಿಗಿಳಿದವರೇ ಬಾವಿ ಕಟ್ಟೆಯಲ್ಲಿ ಬೆಳೆದು ಬಂದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿ,  ನೀರಿಗೆ ಬಿದ್ದಿದ್ದ ಎಲೆಗಳನ್ನು ಬುಟ್ಟಿಯ ಸಹಾಯದಿಂದ ತೆರವುಗೊಳೀಸಿ ಸಾರ್ವಜನಿಕರಿಗೆ ಶುದ್ಧ ನೀರು ಒದಗಿಸುವಲ್ಲಿ ಸಹಕಾರಿಯಾದರು.

ಈ ವೇಳೆ ಸ್ಥಳದಲ್ಲಿದ್ದ ಒಂದನೇ ವಾರ್ಡಿನ ಸದಸ್ಯರಾದ ವಿದ್ಯಾಲಕ್ಷ್ಮೀ ಪ್ರಭು  ಹಾಗೂ ಯು.ಟಿ. ತೌಶಿಫ್ ಅವರು ತನ್ನ ವಾರ್ಡ್ ಅಲ್ಲದಿದ್ದರೂ ಜನರ ಉಪಯೋಗಕ್ಕಾಗಿ ಬಾವಿಗಿಳಿದು ಬಾವಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಸಣ್ಣಣ್ಣರವರ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News