×
Ad

ಜಾತಿ ಗಣತಿ ಸಮೀಕ್ಷಾ ವರದಿ; ಪುನರ್‌ ಪರಿಶೀಲನಾ ವರದಿ ಮೇಲೆ ಚರ್ಚೆ: ಕೋಟ ಶ್ರೀನಿವಾಸ ಪೂಜಾರಿ

Update: 2022-01-10 21:49 IST

ಉಡುಪಿ, ಜ.10: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರಕಾರ ಸುಮಾರು 170ರಿಂದ 180 ಕೋಟಿ ರೂ.ವೆಚ್ಚದಲ್ಲಿ ಸಿದ್ಧಪಡಿಸಿದ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಅನುಷ್ಠಾನಗೊಳಿಸಬೇಕೇ, ಬೇಡವೇ ಎಂಬ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಪುನರ್‌ಪರಿಶೀಲನಾ ವರದಿ ನೀಡಿದ ಬಳಿಕ ನಿರ್ಧರಿಸಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತಿದ್ದರು. ಜಯಪ್ರಕಾಶ್ ಹೆಗ್ಡೆ ನೀಡುವ ವರದಿಯನ್ನು ಕ್ಯಾಬಿನೆಟ್ ಸಭೆಯ ಮುಂದಿಟ್ಟು ಈ ಬಗ್ಗೆ ಚರ್ಚಿಸುತ್ತೇವೆ ಎಂದವರು ತಿಳಿಸಿದರು.

ಸಿದ್ದರಾಮಯ್ಯ ಸರಕಾರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ರಾಗಿದ್ದ ಎಚ್. ಕಾಂತ್‌ರಾಜ್ ಅವರ ನೇತೃತ್ವದಲ್ಲಿ ವರದಿ ಸಿದ್ಧಪಡಿಸಿತ್ತು. ಸಿದ್ದರಾಮಯ್ಯ ಅವರ ಆಳ್ವಿಕೆಯಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೂ ಅವರದನ್ನು ಬಿಡುಗಡೆ ಮಾಡಿರಲಿಲ್ಲ. ಈ ಸಮೀಕ್ಷೆಯ ಮರು ಪರಿಶೀಲನೆಯ ಮಾಹಿತಿ ಪ್ರಕಾರ ಇದಕ್ಕೆ ಪದನಿಮಿತ್ತ ಸದಸ್ಯರ ಸಹಿಯೇ ಆಗಿರಲಿಲ್ಲ. ಕಾಂತ್‌ರಾಜ್ ಅವರ ಅವಧಿಯೂ ಮುಗಿದಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಪ್ರಸ್ತುತ ಅಧ್ಯಕ್ಷರು ಪುನರ್ ಪರಿಶೀಲನೆ ನಡೆಸಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಯಾವ ರಾಜಕೀಯ ಲೆಕ್ಕಾಚಾರ ಇತ್ತೊ ನಮಗೆ ಗೊತ್ತಿಲ್ಲ. ಆದರೆ ನಮಗೆ ಯಾವುದೇ ರಾಜಕೀಯವಿಲ್ಲ. ವರದಿ ಕೈಸೇರಿದ ಕೂಡ ಪರಿಶೀಲಿಸುತ್ತೇವೆ ಎಂದರು.

ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಸಡಿಲ:  ಕೋವಿಡ್-19 ಸೋಂಕು ನಿಯಂತ್ರಣ ಮಾಡಲೇಬೇಕಾಗಿದೆ. ಇದಕ್ಕೆ ಜನರು ಸಹಕಾರ ನೀಡಬೇಕು. ಇನ್ನೂ ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಮಾಡಲ್ಲ ಎಂದು ಸ್ವತಃ ಆರೋಗ್ಯ ಸಚಿವರೇ ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಹೊಸ ಯೋಚನೆ ಮಾಡಬೇಕಿದೆ. ಜನಾಕ್ರೋಶ, ಜನಾಭಿಪ್ರಾಯ ಬಗ್ಗೆ ಅರಿವು ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News