ಲೋನ್ ಆ್ಯಪ್ ಇನ್‌ಸ್ಟಾಲ್ ಮಾಡಿ ಸಮಸ್ಯೆಗೆ ಸಿಲುಕದಿರಿ: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ
ಮನವಿ ಮಂಗಳೂರು, ಜ.12: ಎರಡು ದಿನಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಶಾಂತ್ ಕುಮಾರ್ (26) ಎಂಬ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಲೋನ್ ಆ್ಯಪ್‌ನವರ ಕಿರುಕುಳವೇ ಕಾರಣ ಎಂದು ತಿಳಿದುಬಂದಿದೆ. ಆದ್ದರಿಂದ ಸಾರ್ವಜನಿಕರು ಮೊಬೈಲ್ ಮೂಲಕ ಬಳಸುವ ಇಂತಹ ಲೋನ್ ಆ್ಯಪ್ ಗಳನ್ನು ಬಳಸಬಾರದು. ಈ ಬಗ್ಗೆ ಎಚ್ಚರ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ.
ಚೀನಾ ಮೂಲದ ಈ ಲೋನ್ ಆ್ಯಪ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ದೇಶದಲ್ಲಿ ಸುಮಾರು 600ಕ್ಕೂ ಅಧಿಕ ಇಂತಹ ಲೋನ್ ಆ್ಯಪ್‌ಗಳಿದ್ದು, ಇದನ್ನು ಇನ್‌ಸ್ಟಾಲ್ ಮಾಡುವಾಗ ಅನೇಕ ಷರತ್ತುಗಳನ್ನು ವಿಧಿಸುತ್ತಾರೆ. ಅಂದರೆ ಬಳಕೆದಾರರ ಬೆತ್ತಲೆ ಫೋಟೊ ಪಡೆದುಕೊಳ್ಳುವುದು, ಕಾಂಟಾಕ್ಟ್, ಫೋಟೊ, ವೀಡಿಯೋ, ಕ್ಯಾಮರಾ ಇತ್ಯಾದಿಯನ್ನು ಮುಕ್ತವಾಗಿ ಪಡೆದುಕೊಳ್ಳುವ ಆಪ್ಷನ್ ಕೇಳಲಾಗುತ್ತದೆ. ಎಲ್ಲದಕ್ಕೂ "ಎಸ್ " ಅಂದರೆ ಮಾತ್ರ ಇನ್‌ಸ್ಟಾಲ್ ಪೂರ್ತಿಗೊಳಿಸಲು ಸಾಧ್ಯವಿದೆಆ ಬಳಿಕ 3 ಸಾವಿರ ರೂ.ನಿಂದ 6 ಸಾವಿರ ರೂ.ವೆರೆಗೆ ಸಾಲ ನೀಡುತ್ತಾರೆ. ಆದರೆ ಇದಕ್ಕೆ ಶೇ.30-60ರವರೆಗೆ ಬಡ್ಡಿ ವಿಧಿಸುತ್ತಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಸಾಲದ ಮೊತ್ತವನ್ನು ಹಿಂದಿರುಗಿಸದಿದ್ದರೆ ಬೆತ್ತಲೆ ಫೋಟೊವನ್ನು ಬಳಕೆದಾರರ ಕಾಂಟಾಕ್ಟ್ ಲಿಸ್ಟ್ ನಲ್ಲಿದ್ದರಿಗೆ ಕಳಿಸುವ ಮತ್ತು ಆ ಲಿಸ್ಟ್ ನಲ್ಲಿದ್ದವರಿಗೆ ಬಳಕೆದಾರ ಪಡೆದ ಸಾಲ ಮರಳಿಸಲಿಲ್ಲ ಎಂಬ ಮಾಹಿತಿ ಹಂಚಿ ಮಾನ ಕಳೆಯುವ ಮತ್ತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಿ ನಕಲಿ ಎಫ್‌ಐಆರ್ ಪ್ರತಿ ಕಳಿಸಿ ಬೆದರಿಸಲಾಗುತ್ತದೆ. ಮಾನ ಮರ್ಯಾದೆಗೆ ಹೆದರಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಆ್ಯಪ್‌ಗೆ ಆರ್‌ಬಿಐ ಸಹಿತ ಯಾರಿಂದಲೂ ಮಾನ್ಯತೆ ಇಲ್ಲ. ಹಾಗಾಗಿ ಯಾರೂ ಕೂಡಾ ಇಂತಹ ಆ್ಯಪ್ ಇನ್‌ಸ್ಟಾಲ್ ಮಾಡಿ ತೊಂದರೆಗೆ ಸಿಲುಕಬಾರದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಲೋನ್ ಆ್ಯಪ್ ವಂಚಕರ ಪತ್ತೆಗೆ ತಂಡ ರಚನೆ
ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ನಿವಾಸಿ ಸುಶಾಂತ್ ಕುಮಾರ್ ಆತ್ಮಹತ್ಯೆಗೆ ಲೋನ್ ಆ್ಯಪ್ ಸಂಸ್ಥೆಯ ಕಿರುಕುಳವೇ ಕಾರಣವೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸುಶಾಂತ್ ಕುಮಾರ್ ರ್ಯಾಪಿಡ್ ಆ್ಯಪ್ ಮೂಲಕ 30 ಸಾವಿರ ರೂ. ಆನ್‌ಲೈನ್ ಸಾಲ ಪಡೆದಿದ್ದರು. ಬಳಿಕ ಅದನ್ನು ಪಾವತಿಸಲಾಗದಿದ್ದಾಗ ಆ್ಯಪ್ ಕಂಪನಿಯು ಕಿರುಕುಳ ನೀಡಿತ್ತು. ಲೋನ್ ಆ್ಯಪ್ ಬಳಕೆಯಿಂದ ಮಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಥಮ ಪ್ರಕರಣ ಇದಾಗಿದೆ. ಇದರ ಹಿಂದೆ ವಂಚಕ ತಂಡ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.