ಮೂರನೇ ಟೆಸ್ಟ್: ಬುಮ್ರಾ ಬೌಲಿಂಗ್ ಬಿರುಗಾಳಿಗೆ ದಕ್ಷಿಣ ಆಫ್ರಿಕಾ ತತ್ತರ,ಭಾರತಕ್ಕೆ ಅಲ್ಪ ಮುನ್ನಡೆ

Update: 2022-01-12 14:45 GMT

 ಕೇಪ್‌ಟೌನ್, ಜ.12: ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ(5-42) ಸಾರಥ್ಯದ ಭಾರತದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 76.3 ಓವರ್‌ಗಳಲ್ಲಿ 210 ರನ್ ಕಲೆ ಹಾಕಿ ಆಲೌಟಾಗಿದೆ. ವಿರಾಟ್ ಕೊಹ್ಲಿ ಬಳಗವು ಮೊದಲ ಇನಿಂಗ್ಸ್‌ನಲ್ಲಿ 13 ರನ್ ಮುನ್ನಡೆ ಪಡೆದಿದೆ.

ಎರಡನೇ ದಿನದಾಟವಾದ ಬುಧವಾರ 1 ವಿಕೆಟ್ ನಷ್ಟಕ್ಕೆ 17 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾದ ಪರ ಕೀಗನ್ ಪೀಟರ್ಸನ್(72, 166 ಎಸೆತ, 9 ಬೌಂಡರಿ)ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನೀಡಿದರು. ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದಾಗ ಒತ್ತಡದಲ್ಲಿ ದಿಟ್ಟ ಪ್ರದರ್ಶನ ನೀಡಿದ ಪೀಟರ್ಸನ್ 101 ಎಸೆತಗಳನ್ನು ಎದುರಿಸಿ ಸರಣಿಯಲ್ಲಿ ಎರಡನೇ ಅರ್ಧಶತಕವನ್ನು ದಾಖಲಿಸಿದರು. ಟೆಂಬ ಬವುಮಾ(28 ರನ್), ಕೇಶವ ಮಹಾರಾಜ್(25), ರಾಸ್ಸಿ ವಾನ್‌ಡರ್ ಡುಸ್ಸನ್(21)ಹಾಗೂ ಕಾಗಿಸೊ ರಬಾಡ(17)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್(2-64), ಮುಹಮ್ಮದ್ ಶಮಿ(2-39)ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News