ದೇಶದಲ್ಲಿ ಒಂದೇ ದಿನ 2.5 ಲಕ್ಷ ಕೋವಿಡ್-19 ಪ್ರಕರಣ
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ದೇಶದಲ್ಲಿ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಬುಧವಾರ ದೇಶಾದ್ಯಂತ ಸುಮಾರು 2.5 ಲಕ್ಷ ಪ್ರಕರಣಗಳು ವರದಿಯಾಗಿವೆ.
ಮಂಗಳವಾರಕ್ಕಿಂತ 50 ಸಾವಿರಕ್ಕೂ ಅಧಿಕ ಪ್ರಕರಣಗಳು ಬುಧವಾರ ವರದಿಯಾಗಿದ್ದು, ಮೇ 26ರ ಬಳಿಕ ಇದೇ ಮೊದಲ ಬಾರಿಗೆ ಪ್ರಕರಣಗಳ ಸಂಖ್ಯೆ 2 ಲಕ್ಷವನ್ನು ದಾಟಿದೆ.
ತ್ರಿಪುರಾದಿಂದ ಅಂಕಿ ಅಂಶಗಳು ಇನ್ನೂ ಬಂದಿಲ್ಲ. ಈಗಾಗಲೇ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 2,46,443ನ್ನು ತಲುಪಿದೆ. ಅಂತಿಮ ಸಂಖ್ಯೆ 2.47 ಲಕ್ಷವನ್ನು ದಾಟುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ದೇಶದಲ್ಲಿ ಎರಡನೇ ಅಲೆ ಉತ್ತುಂಗದಲ್ಲಿದ್ದ ಅವಧಿಯಲ್ಲಿ 2021ರ ಏಪ್ರಿಲ್ 27ರಂದು ಒಂದೇ ದಿನ 43,196 ಪ್ರಕರಣಗಳು ಹೆಚ್ಚಿದ್ದವು.
ತ್ರಿಪುರಾ ಹೊರತುಪಡಿಸಿ ದೇಶದಲ್ಲಿ 203 ಮಂದಿ ಸೋಂಕಿತರು ಮೃತಪಟ್ಟಿದ್ದು, ಅಕ್ಟೋಬರ್ 27ರ ಬಳಿಕ ಸಾವಿನ ಸಂಖ್ಯೆ ಮೊದಲ ಬಾರಿಗೆ 200ರ ಗಡಿ ದಾಟಿದೆ. ದೈನಿಕ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಸೋಮವಾರ ಪ್ರಕರಣ ಇಳಿಮುಖವಾದ್ದನ್ನು ಹೊರತುಪಡಿಸಿದರೆ. ಡಿಸೆಂಬರ್ 28ರ ಬಳಿಕ ಸತತ 15 ದಿನಗಳ ಕಾಲ ಪ್ರಕರಣಗಳ ಏರಿಕೆ ದರ ಎರಡಂಕಿಯಷ್ಟು ಇದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಶೇಕಡ 26.1ರಷ್ಟು ಅಧಿಕ ಪ್ರಕರಣಗಳು ವರದಿಯಾಗಿವೆ.
ದೈನಿಕ ಪ್ರಕರಣಗಳಲ್ಲಿ ಏರಿಕೆಯ ಹೊರತಾಗಿಯೂ, ಎರಡನೇ ಅಲೆಗೆ ಹೋಲಿಸಿದರೆ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ಏಪ್ರಿಲ್ 14ರಂದು ಒಟ್ಟು ಪ್ರಕರಣಗಳ ಸಂಖ್ಯೆ 2 ಲಕ್ಷ ದಾಟಿತ್ತು. ಅಂದು 896 ಸಾವು ಸಂಭವಿಸಿತ್ತು. ಆದಾಗ್ಯೂ ಸಾವಿನ ಸಂಖ್ಯೆ ನಿಧಾನವಾಗಿ ಏರುಗತಿಯಲ್ಲಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ವಾರ ಸಾವಿನ ಪ್ರಮಾಣ ಶೇಕಡ 81ರಷ್ಟು ಹೆಚ್ಚಿದೆ.
ವಿಶ್ವಮಟ್ಟದಲ್ಲಿ ಕೂಡಾ ಅತ್ಯಧಿಕ ಪ್ರಕರಣಗಳು ವರದಿಯಾದ ದೇಶಗಳ ಪೈಕಿ ಒಂದಾಗಿ ಭಾರತ ಮುಂದುವರಿದಿದೆ. ಜನವರಿ 11ರಂದು ಅಮೆರಿಕ ಹೊರತುಪಡಿಸಿ ಅತ್ಯಧಿಕ ಪ್ರಕರಣಗಳು ವರದಿಯಾಗಿರುವುದು ಭಾರತದಲ್ಲಿ. ಅಮೆರಿಕ, ಭಾರತ, ಬ್ರಿಟನ್ ಹಾಗೂ ಇಟಲಿಯಲ್ಲಿ ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.