×
Ad

ಉತ್ತರ ಪ್ರದೇಶ: ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಪಕ್ಷದ ಮುಖಂಡರು ಚಿಂತನೆ

Update: 2022-01-13 07:35 IST
(Photo - PTI)

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಹಲವು ಮಂದಿ ಹಿಂದುಳಿದ ವರ್ಗದ ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದು, ಕಳೆದ ಎರಡು ದಿನಗಳಲ್ಲಿ ಆರು ಮಂದಿ ಬಿಜೆಪಿ ಮುಖಂಡರು ಪಕ್ಷ ತೊರೆದಿದ್ದಾರೆ. ಏತನ್ಮಧ್ಯೆ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಸ್ವಕ್ಷೇತ್ರ ಗೋರಖ್‌ಪುರದ ಬದಲಾಗಿ ಅಯೋಧ್ಯೆಯಿಂದ ಕಣಕ್ಕಿಳಿಸಲು ಪಕ್ಷದ ಮುಖಂಡರು ಚಿಂತನೆ ನಡೆಸಿದ್ದಾರೆ. ಈ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಒಪ್ಪಿಗೆ ದೊರೆಯಬೇಕಿದೆ ಎಂದು ತಿಳಿದು ಬಂದಿದೆ.

ಪೂರ್ವ ಉತ್ತರ ಪ್ರದೇಶದ ನಾಯಕನಾಗಿರುವ 49 ವರ್ಷ ವಯಸ್ಸಿನ ಆದಿತ್ಯನಾಥ್, ಐದು ಬಾರಿ ಲೋಕಸಭೆ ಸದಸ್ಯರಾಗಿ ಗೋರಖ್‌ ಪುರದಿಂದ ಆಯ್ಕೆಯಾಗಿದ್ದರು. ಆದಾಗ್ಯೂ ಪೂರ್ವ ಉತ್ತರ ಪ್ರದೇಶದಲ್ಲಿ ಓಬಿಸಿ ನಾಯಕರ ಪಕ್ಷತ್ಯಾಗದಿಂದಾಗಿ ಪಕ್ಷ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ ಬಿಜೆಪಿಯ ರಾಜಕೀಯ ವರ್ಚಸ್ಸು ಬೆಳೆಯಲು ಕಾರಣವಾಗಿರುವುದರಿಂದ ಈ ಕ್ಷೇತ್ರದಿಂದ ಆದಿತ್ಯನಾಥ್ ರನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಇದು ಹಿಂದುತ್ವ ಐಕಾನ್ ಆಗಿ ತಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ಯೋಗಿಗೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ದೇಗುಲ ನಗರಿ ಅವಧ್ ಪ್ರದೇಶದಲ್ಲಿದ್ದು, ಇಲ್ಲಿ ಸಾಂಪ್ರದಾಯಿಕವಾಗಿ ಸಮಾಜವಾದಿ ಪಕ್ಷ ಪ್ರಬಲವಾಗಿದೆ. ಪ್ರಸ್ತುತ ಅಯೋಧ್ಯೆ ಕ್ಷೇತ್ರವನ್ನು ಬಿಜೆಪಿಯ ವೇದ ಪ್ರಕಾಶ್ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ 10 ಗಂಟೆಗಳ ಸುಧೀರ್ಘ ಸಭೆಯನ್ನು ಬಿಜೆಪಿ ಮುಖಂಡರು ನಡೆಸಿದ್ದು, ರಾಜ್ಯದ ತಳಮಟ್ಟದ ವಾಸ್ತವಗಳ ಬಗ್ಗೆ ಪ್ರಾದೇಶಿಕ ಉಸ್ತುವಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆದಿತ್ಯನಾಥ್ ಅಯೋಧ್ಯೆಯಿಂದ ಕಣಕ್ಕಿಳಿಯುವ ಪ್ರಸ್ತಾವ ಈ ಸಭೆಯಲ್ಲೇ ಚರ್ಚೆಗೆ ಬಂದಿದೆ.

ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಆದಿತ್ಯನಾಥ್, ಪಕ್ಷದ ಮುಖಂಡರು ನಿರ್ಧರಿಸಿದ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಸಿದ್ಧ ಎಂದು ತಿಳಿದು ಬಂದಿದೆ. ಫೆ. 10 ಮತ್ತು 14ರಂದು ನಡೆಯುವ ಮೊದಲ ಎರಡು ಹಂತಗಳ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒಳಗೊಂಡ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಕಾರ್ಯೋನ್ಮುಖವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News