ಗೋವಾದಲ್ಲೂ ಶಾಸಕರ ರಾಜೀನಾಮೆ, ಬಂಡಾಯ ಪರ್ವ

Update: 2022-01-13 02:23 GMT

ಬೆಳಗಾವಿ: ಫೆಬ್ರುವರಿ 14ರಂದು ನಡೆಯುವ ಗೋವಾ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೋವಾ ಶಾಸಕರ ರಾಜೀನಾಮೆ ಮತ್ತು ಪಕ್ಷಾಂತರ ಪರ್ವ, ರಾಜ್ಯ ರಾಜಕೀಯದಲ್ಲಿ ಅಭೂತಪೂರ್ವ ಸ್ಥಿತಿಗೆ ಕಾರಣವಾಗಿದೆ.

ಮುಂದಿನ ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯದ ಕನಸಿನಲ್ಲಿ ಕಳೆದ ಕೆಲ ವಾರಗಳಲ್ಲಿ ಕನಿಷ್ಠ ಒಂಬತ್ತು ಮಂದಿ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಿದ್ದಾರೆ. ಗೋವಾ ರಾಜಕೀಯದ ಚಂಚಲ ಸ್ಥಿತಿಯ ಹಿನ್ನೆಲೆಯಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬಳಿಕ ಮತ್ತಷ್ಟು ಸದಸ್ಯರ ರಾಜೀನಾಮೆ ಹಾಗೂ ಪಕ್ಷಾಂತರವನ್ನು ನಿರೀಕ್ಷಿಸಬಹುದಾಗಿದೆ.

ಬಹುತೇಕ ಪಕ್ಷಾಂತರಗಳು ನಡೆದಿರುವುದು ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಲಾಭಕ್ಕಾಗಿ. "ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಎಲ್ಲ ಹಾಲಿ ಶಾಸಕರನ್ನು ಮತ್ತೆ ಕಣಕ್ಕೆ ಇಳಿಸುವ ಬಗ್ಗೆ ಉತ್ಸುಕರಾಗಿಲ್ಲದಿರುವುದು ಪಕ್ಷಾಂತರಕ್ಕೆ ಮುಖ್ಯ ಕಾರಣ. ತಮಗೆ ಅಥವಾ ತಮ್ಮ ಹಿಂಬಾಲಕರಿಗೆ ಟಿಕೆಟ್ ಪಡೆಯುವ ಹತಾಶ ಪ್ರಯತ್ನವಾಗಿ ಪಕ್ಷಾಂತರಕ್ಕೆ ಮುಂದಾಗುತ್ತಿದ್ದಾರೆ. ಹೀಗೆ ಮಾಡಿದಲ್ಲಿ ತಾವು ಸೇರುವ ಪಕ್ಷದವರು ತಮಗೆ ಟಿಕೆಟ್ ನೀಡುವುದು ಖಚಿತ ಎಂಬ ಭಾವನೆಯಲ್ಲಿದ್ದಾರೆ" ಎಂದು ಗೋವಾದ ಹಿರಿಯ ಪತ್ರಕರ್ತ ಪ್ರಕಾಶ್ ಭಟ್ ವಿಶ್ಲೇಷಿಸಿದ್ದಾರೆ.

ಕೆಲ ಮುಖಂಡರ ರಾಜೀನಾಮೆ ಅಥವಾ ಪಕ್ಷಾಂತರ ಬಿಜೆಪಿ ಅಥವಾ ಕಾಂಗ್ರೆಸ್‌ನ ಚುನಾವಣಾ ಯಶಸ್ಸಿಗೆ ದೊಡ್ಡ ಏಟು ನೀಡುವ ಸಾಧ್ಯತೆ ಇಲ್ಲವಾದರೂ, ಕೆಲವು ಮುಖಂಡರ ಪಕ್ಷಾಂತರ ಪಕ್ಷದ ನಿರೀಕ್ಷೆ ಮತ್ತು ಸಮೀಕರಣವನ್ನು ಬದಲಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದ ಮೈಕೆಲ್ ಲೋಬೊ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿರುವುದು, ಉತ್ತರ ಗೋವಾದ ಬರ್ದೆರ್ ತಾಲೂಕಿನಲ್ಲಿ ಗರಿಷ್ಠ ಸ್ಥಾನ ಪಡೆಯುವ ಬಿಜೆಪಿ ಕನಸಿಗೆ ಅಡ್ಡಿಯಾಗಲಿದೆ ಎಂದು ಹೇಳಲಾಗಿದೆ. ಈ ಭಾಗದ ಏಳು ಕ್ಷೇತ್ರಗಳಲ್ಲಿ ಲೋಬೊ ವರ್ಚಸ್ಸು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News