ಬೈಕಂಪಾಡಿ ಕೆಗಾರಿಕಾ ವಲಯದಲ್ಲಿ ‘ಗೇಲ್’ ಕಂಪೆನಿಯ ಅವಾಂತರ; ಹೊಂಡ ಅಗೆದಿಟ್ಟ ನೀರು ಸರಬರಾಜಿನ ಪೈಪ್‌ಲೈನ್ ಗೆ ಹಾನಿ

Update: 2022-01-13 04:32 GMT

ಮಂಗಳೂರು : ಬೈಕಂಪಾಡಿ ಕೈಗಾರಿಕಾ ವಲಯದ ಕೆಲವೆಡೆ ‘ಗೇಲ್ ಇಂಡಿಯಾ’ ಕಂಪೆನಿಯು ಪೈಪ್‌ಲೈನ್ ಕಾಮಗಾರಿಗೆ ಎಂದು ಹೊಂಡ ಅಗೆದಿಟ್ಟ ಪರಿಣಾಮ ಕಳೆದ 10-12 ದಿನಗಳಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಇಲ್ಲಿನ ಕೈಗಾರಿಕೆಗಳು ತೀವ್ರ ಸಮಸ್ಯೆಗೆ ಸಿಲುಕಿವೆ.

ಕೈಗಾರಿಕಾ ಅಗತ್ಯಕ್ಕೆ ಮಾತ್ರವಲ್ಲದೆ ಕುಡಿಯಲು ಸಹ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಬಳಿ ಸಮಸ್ಯೆ ತೋಡಿಕೊಂಡರೆ ದುರಸ್ತಿಪಡಿಸುವ ಬದಲು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

‘ಗೇಲ್ ಇಂಡಿಯಾ’ ಕಂಪೆನಿಯು ಕೊಳವೆ ಮೂಲಕ ಅನಿಲ ಸಾಗಿಸಲು ಕೆಲವು ತಿಂಗಳಿನಿಂದ ಇಲ್ಲಿ ಹೊಂಡ ತೋಡುತ್ತಿದೆ. ಈ ಸಂದರ್ಭ ನೀರು ಸರಬರಾಜಿನ ಮುಖ್ಯ ಪೈಪ್‌ಲೈನ್‌ಗೂ ಹಾನಿಯಾಗಿದ್ದು, ಇದರಿಂದ ಕೈಗಾರಿಕಾ ವಲಯದ ಹಲವು ಉದ್ಯಮ ಕಂಪೆನಿಗಳಿಗೆ ಎರಡು ವಾರಗಳಿಂದ ನೀರು ಪೂರೈಕೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಕೈಗಾರಿಕಾ ಚಟುವಟಿಕೆಗಳಿಗೆ, ಇಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಮತ್ತವರ ಕುಟುಂಬಸ್ಥರು ಕುಡಿಯಲು, ಸ್ನಾನ/ಶೌಚಕ್ಕೆ ನೀರಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಇದೀಗ ಇಲ್ಲಿನ ಉದ್ಯಮಿಗಳು ಪ್ರತೀ ದಿನ ಸಾವಿರಾರು ರೂ. ವ್ಯಯಿಸಿ ಖಾಸಗಿಯವರಿಂದ ಟ್ಯಾಂಕರ್ ಮೂಲಕ ನೀರನ್ನು ತರಿಸಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ.

ನೀರಿಲ್ಲದ ಕಾರಣ ಕಾರ್ಮಿಕರು ಬೇರೆ ಕಡೆ ಕೆಲಸ ಅರಸಿಕೊಂಡು ಹೋಗಲು ಸನ್ನದ್ಧರಾಗಿದ್ದಾರೆ. ಒಂದು ವೇಳೆ ಕಾರ್ಮಿಕರು ಕೆಲಸ ತೊರೆದು ಹೋದರೆ ಉದ್ಯಮವನ್ನು ಮುಂದುವರಿಸಲು ಸಾಧ್ಯವೇ ಎಂದು ಉದ್ಯಮಿಗಳು ಆತಂಕಿತರಾಗಿದ್ದಾರೆ. ಸಮಸ್ಯೆ ಸೃಷ್ಟಿಯಾದಂದಿನಿಂದ ಈವರೆಗೆ ದಿನಂಪ್ರತಿ ಉದ್ಯಮಿಗಳು, ಕಂಪೆನಿಗಳ ವ್ಯವಸ್ಥಾಪಕರು ಗೇಲ್ ಇಂಡಿಯಾ ಕಂಪೆನಿ, ಕೆಐಎಡಿಬಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪೈಪ್‌ಲೈನ್ ದುರಸ್ತಿಪಡಿಸಲು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ತುರ್ತಾಗಿ ಪೈಪ್‌ಲೈನ್ ದುರಸ್ತಿಪಡಿಸಿ ನೀರು ಸರಬರಾಜು ಮಾಡುವ ಬದಲು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಉದ್ಯಮಿಗಳು ಆರೋಪಿಸಿದ್ದಾರೆ.

ರಸ್ತೆ ಸಂಪರ್ಕವೂ ಇಲ್ಲ

ಪೈಪ್‌ಲೈನ್‌ಗೆ ತೋಡಿದ ಹೊಂಡದಿಂದ ನೀರು ಸರಬರಾಜಿನ ಪೈಪ್‌ಗೆ ಹಾನಿಯಾದ ಪರಿಣಾಮ ಒಂದೆಡೆ ದಿನನಿತ್ಯ ಸಾವಿರಾರು ಲೀ. ನೀರು ಸೋರಿಕೆಯಾಗಿ ಪೋಲಾಗುತ್ತಿದ್ದರೆ ಇನ್ನೊಂದೆಡೆ ರಸ್ತೆ ಸಂಪರ್ಕಕ್ಕೂ ಸಮಸ್ಯೆ ಉಂಟಾಗಿದೆ. ಕೆಲವು ಕೈಗಾರಿಕಾ ಸ್ಥಾವರಗಳನ್ನು ಸಂಪರ್ಕಿಸಲು ರಸ್ತೆಯೇ ಇಲ್ಲವಾಗಿದೆ. ಅಲ್ಲಲ್ಲಿ ಹೊಂಡ ತೋಡಿದ್ದರಿಂದ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೆಲವು ಕಂಪೆನಿಗಳಿಗೆ ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲೂ ಕೂಡ ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಉದ್ಯಮಿಗಳು ದೂರಿದ್ದಾರೆ.

ಬೈಕಂಪಾಡಿ ಕೈಗಾರಿಕಾ ವಲಯದ ಪೈಪ್‌ಲೈನ್ ಸೋರಿಕೆ ನಿರ್ವಹಣೆಯ ಗುತ್ತಿಗೆಯನ್ನು ವಹಿಸಿಕೊಂಡ ಸಂಸ್ಥೆಗೆ ಪೈಪ್‌ಲೈನ್ ದುರಸ್ತಿಗಾಗಿ ನಾವು ಹಣವನ್ನೂ ಪಾವತಿಸಿದ್ದೇವೆ. ಅದನ್ನು ಅವರೇ ದುರಸ್ತಿಪಡಿಸಬೇಕು ಎಂದು ಗೇಲ್ ಇಂಡಿಯಾ ಕಂಪೆನಿಯವರು ಹೇಳಿಕೊಂಡಿದ್ದಾರೆ. ಆದರೆ ಮನಪಾದಿಂದ ಲೀಕೇಜ್ ನಿರ್ವಹಣೆಯ ಜವಾಬ್ದಾರಿ ಹೊತ್ತ ಸಂಸ್ಥೆಯವರು ಗೇಲ್ ಕಂಪೆನಿಯವರ ಈ ಹೇಳಿಕೆಯನ್ನು ನಿರಾಕರಿಸುತ್ತಾರೆ. ಅದನ್ನು ದುರಸ್ತಿಪಡಿಸುವ ಜವಾಬ್ದಾರಿ ನಮ್ಮದಲ್ಲ. ನಾವು ಅವರಿಂದ ಹಣವನ್ನೂ ಪಡೆದಿಲ್ಲ. ಗೇಲ್ ಕಂಪೆನಿಯವರೇ ಅದನ್ನು ದುರಸ್ತಿಪಡಿಸಬೇಕಾಗಿದೆ ಎಂದು ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

''ಇದು ಗೇಲ್ ಇಂಡಿಯಾ ಕಂಪೆನಿಯ ಬೇಜವಾಬ್ದಾರಿಯಿಂದ ಆದ ಸಮಸ್ಯೆ. ಹೊಂಡ ತೋಡುವಾಗ ಪೈಪ್‌ಲೈನ್ ದುರಸ್ತಿಪಡಿಸಿ ನಮಗೆ ನೀರು ಸಿಗದಂತೆ ಅನ್ಯಾಯ ಮಾಡಿದ್ದಾರೆ. ನೀರಿಗಾಗಿ ನಾವೀಗ ಪರದಾಡುವಂತಾಗಿದೆ. ಇಲ್ಲಿನ ಬೇರೆ ಬೇರೆ ಕಂಪೆನಿಗಳ ಕಾರ್ಮಿಕರು ನೀರಿಲ್ಲದ ಕಾರಣ ಬೇರೆ ಕಡೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ 10-12 ದಿನದಿಂದ ನಾವು ಗೇಲ್ ಕಂಪೆನಿಯ ಅಧಿಕಾರಿಗಳಿಗೆ ನಮ್ಮ ಸಮಸ್ಯೆಯನ್ನು ಹೇಳಿಕೊಂಡರೂ ಅವರಿನ್ನೂ ಸ್ಪಂದಿಸಿಲ್ಲ''.

- ಸುರೇಶ್, ಕಾರ್ಮಿಕ

''ನಾನು ಈ ಭಾಗದಲ್ಲಿ ಸಿವಿಲ್ ಕೆಲಸಗಳ ಗುತ್ತಿಗೆ ವಹಿಸಿಕೊಂಡಿರುವೆ. ಗೇಲ್ ಕಂಪೆನಿಯವರ ಎಡವಟ್ಟಿನಿಂದ ಕೆಲವು ದಿನದಿಂದ ನಮಗಿಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿದೆ. ನೀರಿಲ್ಲದೆ ಕೆಲಸಗಳೂ ಸ್ಥಗಿತಗೊಂಡಿವೆ. ದಿನನಿತ್ಯ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದೇವೆ. ಈಗ ಬರುತ್ತೇವೆ, ಮತ್ತೆ ಬರುತ್ತೇವೆ ಎಂದು ಹೇಳುತ್ತಾರೆಯೇ ವಿನಃ ಯಾರೂ ಬಂದು ದುರಸ್ತಿಪಡಿಸುತ್ತಿಲ್ಲ''.

-ರಾಮಚಂದ್ರ ಕೊಟ್ಟಾರ, ಗುತ್ತಿಗೆದಾರ

''ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಗೇಲ್ ಕಂಪೆನಿಯಿಂದಾಗಿ ತುಂಬಾ ಕಂಪೆನಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲಿರುವ ಕಾರ್ಮಿಕರಿಗೂ ತೊಂದರೆಯಾಗಿದೆ.ಈ ಬಗ್ಗೆ ನಾನು ಮೇಯರ್, ಆಯುಕ್ತರು ಹಾಗೂ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ''.

- ಸುಮಿತ್ರಾ, ಕಾರ್ಪೊರೇಟರ್, 10ನೇ ವಾರ್ಡ್, ಬೈಕಂಪಾಡಿ

ಕೆಐಎಡಿಬಿಗೆ ಮನವಿ

ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕೆನರಾ ಸಣ್ಣ ಕೈಗಾರಿಕೆಗಳ ಅಸೋಸಿಯೇಶನ್ ಹಾಗೂ ಕೆಐಎಡಿಬಿಗೆ ಸ್ಥಳೀಯ ಉದ್ಯಮಿಗಳ ನಿಯೋಗವು ಬುಧವಾರ ಮನವಿ ಸಲ್ಲಿಸಿದೆ. ಉದ್ದಿಮೆಗಳು ಮತ್ತು ಕಾರ್ಮಿಕರು ಎದುರಿಸುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ನಿಯೋಗವು ಶೀಘ್ರ ಪೈಪ್‌ಲೈನ್ ದುರಸ್ತಿಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News