ಉತ್ತರಪ್ರದೇಶ: ಬಿಜೆಪಿ ತೊರೆದ ಇನ್ನೋರ್ವ ಶಾಸಕ

Update: 2022-01-13 06:08 GMT
Photo: ANI

ಲಕ್ನೊ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪಕ್ಷಾಂತರ ಪರ್ವ ಬಿರುಸಿನಿಂದ ಸಾಗಿದ್ದು, ಆಡಳಿತಾರೂಢ ಬಿಜೆಪಿಯ ಇನ್ನೋರ್ವ ಶಾಸಕ ಗುರುವಾರ ಪಕ್ಷವನ್ನು ತ್ಯಜಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಸತತ ಮೂರನೇ ದಿನವೂ ಬಿಜೆಪಿಯಿಂದ ನಾಯಕರ ನಿರ್ಗಮನ ಮುಂದುವರಿದಿದ್ದು, ಬಿಜೆಪಿ ಶಾಸಕ ಹಾಗೂ  ಹಿಂದುಳಿದ ಜಾತಿ ನಾಯಕ ಮುಖೇಶ್ ವರ್ಮಾ ಇಂದು ಬಿಜೆಪಿ ತೊರೆದಿದ್ದಾರೆ. ವರ್ಮಾ ಬಿಜೆಪಿಯನ್ನು ತ್ಯಜಿಸುತ್ತಿರುವ 7ನೇ ಶಾಸಕನಾಗಿದ್ದಾರೆ. ಮುಖೇಶ್ ವರ್ಮಾ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಹಾಗೂ  ಈಗಾಗಲೇ ಸಚಿವ ಸ್ಥಾನ ತೊರೆದಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಫಿರೋಝಾಬಾದ್‌ನ ಶಾಸಕರಾದ ಮುಖೇಶ್ ವರ್ಮಾ ಅವರು ಒಬಿಸಿ (ಇತರ ಹಿಂದುಳಿದ ವರ್ಗ) ನಾಯಕರೂ ಆಗಿದ್ದಾರೆ. ಪ್ರಮುಖ ಒಬಿಸಿ ನಾಯಕ  ಸ್ವಾಮಿ ಪ್ರಸಾದ್ ಮೌರ್ಯ ಹಾಗೂ  ಇತರ ನಾಲ್ವರು ಇತ್ತೀಚೆಗಷ್ಟೇ ಬಿಜೆಪಿಯನ್ನು ತೊರೆದಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರಕಾರವು ದಲಿತರು, ಹಿಂದುಳಿದ ಜಾತಿಗಳು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಜನ ಪ್ರತಿನಿಧಿಗಳನ್ನು ಅಗೌರವದಿಂದ ನಡೆಸಿಕೊಂಡಿದೆ ಎಂದು ವರ್ಮಾ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

"ರಾಜ್ಯ ಸರಕಾರವು ದಲಿತರು, ಹಿಂದುಳಿದ ಜಾತಿಗಳು, ರೈತರು, ನಿರುದ್ಯೋಗಿ ಯುವಕರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ದಬ್ಬಾಳಿಕೆ ನಡೆಸಿದೆ. ಈ ನೀತಿಗಳಿಂದಾಗಿ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ಶೋಷಿತರ ಧ್ವನಿ ಹಾಗೂ  ನಮ್ಮ ನಾಯಕ. ನಾನು ಅವರೊಂದಿಗೆ ಇದ್ದೇನೆ’’ ಶಾಸಕ ವರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News