ಉತ್ತರಪ್ರದೇಶ ಚುನಾವಣೆ:ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಕಣಕ್ಕಿಳಿಸಿದ ಕಾಂಗ್ರೆಸ್

Update: 2022-01-13 07:29 GMT

ಲಕ್ನೊ: ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ 2017ರ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಕಣಕ್ಕಿಳಿಸಿದೆ. ಇಂದು ಪಕ್ಷ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಉನ್ನಾವೊ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಕೂಡ ಸೇರಿದ್ದಾರೆ.

"ನೀವು ಕಿರುಕುಳ ಹಾಗೂ  ಚಿತ್ರಹಿಂಸೆಗೆ ಬಲಿಯಾಗಿದ್ದರೆ, ಕಾಂಗ್ರೆಸ್ ನಿಮ್ಮನ್ನು ಬೆಂಬಲಿಸುತ್ತದೆ ಎಂಬ ಹೊಸ ಸಂದೇಶವನ್ನು ನಮ್ಮ ಪಟ್ಟಿ ರವಾನಿಸುತ್ತದೆ" ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆಂದು NDTV ವರದಿ ಮಾಡಿದೆ.

19 ವರ್ಷದ ಸಂತ್ರಸ್ತೆಯ ತಾಯಿಯ ಹೆಸರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಮಾಜಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ 19 ವರ್ಷದ ಯುವತಿಯ ಮೇಲಿನ ಅತ್ಯಾಚಾರದ ಅಪರಾಧಿಯಾಗಿದ್ದು, ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

40 ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಹೇಳಿರುವ ಪ್ರಿಯಾಂಕಾ,"ನಮ್ಮ ಪಕ್ಷವನ್ನು ಬಲಪಡಿಸುವುದು ಹಾಗೂ  ನಮ್ಮ ಅಭ್ಯರ್ಥಿಗಳು ಜನರ ಸಮಸ್ಯೆಗಳ ಬಗ್ಗೆ ಹೋರಾಡುವುದು ನಮ್ಮ ಗುರಿಯಾಗಿದೆ. ನಾವು ನಕಾರಾತ್ಮಕ ಪ್ರಚಾರಕ್ಕೆ ಒಳಗಾಗುವುದಿಲ್ಲ. ನಮ್ಮ ಪ್ರಚಾರವು ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಇರುತ್ತದೆ'' ಎಂದು ಅವರು ಹೇಳಿದರು.

"ನಾನು ಉತ್ತರಪ್ರದೇಶದಲ್ಲಿ ಆರಂಭಿಸಿದ್ದನ್ನು ಮುಂದುವರಿಸುತ್ತೇನೆ ಮತ್ತು ಚುನಾವಣೆಯ ನಂತರವೂ ರಾಜ್ಯದಲ್ಲಿಯೇ ಇರುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ" ಎಂದು ಅವರು ಹೇಳಿದರು.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News