ಭಾರತಕ್ಕೆ 'ಟೆಸ್ಲಾ' ಕಾರುಗಳು ಆಗಮಿಸಲಿದೆಯೇ?: ಎಲಾನ್ ಮಸ್ಕ್ ಹೇಳಿದ್ದೇನು?

Update: 2022-01-13 13:49 GMT
Photo: ECONOMIC TIMES

ಹೊಸದಿಲ್ಲಿ: ಟೆಸ್ಲಾ ಕಂಪೆನಿಯ ಸಿಇಒ ಇಲೋನ್ ಮಸ್ಕ್ ಅವರಿಗೆ ತಮ್ಮ ಕಂಪೆನಿಯ ಇಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ 2019ರಲ್ಲಿಯೇ ಮಾರಾಟ ಮಾಡುವ ಮನಸ್ಸಿತ್ತು. ಆದರೆ ಮೂರು ವರ್ಷಗಳ ನಂತರವೂ ಅಮೆರಿಕಾದ ಈ ಖ್ಯಾತ ಕಂಪೆನಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.

"ಹಲವಾರು ಸವಾಲುಗಳಿಗೆ ಸಂಬಂಧಿಸಿದಂತೆ ಈಗಲೂ ಸರಕಾರದ ಜತೆ ಮಾತುಕತೆಗಳು ನಡೆಯುತ್ತಿವೆ" ಎಂದು ಇಲೋನ್ ಮಸ್ಕ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ. ಟೆಸ್ಲಾ ಕಾರುಗಳು ಭಾರತದಲ್ಲಿ ಬರಲಿವೆಯೇ ಎಂದು ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರ ರೂಪದಲ್ಲಿ ಅವರ ಟ್ವೀಟ್ ಬಂದಿದೆ.

ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವ ಕುರಿತಂತೆ ಇಲೋನ್ ಮಸ್ಕ್ ಅವರು ಭಾರತ ಸರಕಾರ ಜತೆ ಹಲವು ವರ್ಷಗಳಿಂದ ಮಾತುಕತೆ ನಡೆಯುತ್ತಿದೆಯಾದರೂ ಸ್ಥಳೀಯ ಕಾರು ಉತ್ಪಾದಕ ಕಾರ್ಖಾನೆ ಕುರಿತಂತೆ ಭಿನ್ನಾಭಿಪ್ರಾಯಗಳು ಹಾಗೂ ದೇಶ ಹೇರುವ ಆಮದು ಸುಂಕ ಸಾಕಷ್ಟು ಅಡೆತಡೆಗಳಿಗೆ ಕಾರಣವಾಗಿದೆ.

ಇಲೋನ್ ಮಸ್ಕ್ ಅವರು ತೆರಿಗೆ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಬೇಡಿಕೆ ಇರಿಸಿದ್ದಾರೆನ್ನಲಾಗಿದ್ದು ತೆರಿಗೆಗಳು ಕಡಿಮೆಯಾದಲ್ಲಿ ಭಾರತದಲ್ಲಿ ಕಡಿಮೆ ದರಗಳಿಗೆ ಕಾರುಗಳನ್ನು ಮಾರಾಟ ಮಾಡಬಹುದೆಂಬುದು ಅವರ ಅಭಿಪ್ರಾಯವಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಸಚಿವರೊಬ್ಬರು ಈ ಕುರಿತು ಪ್ರತಿಕ್ರಿಯಿಸಿ  ಟೆಸ್ಲಾ ಕಂಪೆನಿಯು ಚೀನಾ ನಿರ್ಮಿತ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವ ಬದಲು ಇಲ್ಲಿಯ ಘಟಕದಲ್ಲಿಯೇ ತಯಾರಿಸಿದ ಕಾರುಗಳನ್ನು ಮಾರಾಟ ಮಾಡಬೇಕೆಂದು ಹೇಳಿದ್ದರು.

ಟೆಸ್ಲಾ ಭಾರತಕ್ಕೆ ಕಾಲಿಟ್ಟಿದ್ದೇ ಆದರೂ ಅದು  ಇತರ ವಿದೇಶಿ ಕಂಪೆನಿಗಳಿಂದ ಸ್ಪರ್ಧೆ ಎದುರಿಸಬೇಕಿದೆ. ಈಗಾಗಲೇ ಮರ್ಸಿಡಿಸ್ ಬೆನ್ಝ್ ತಾನು ಎಸ್-ಕ್ಲಾಸ್ ಸೀಡನ್  ಕಾರನ್ನು ಭಾರತದಲ್ಲಿ ಈ ವರ್ಷದ ನಾಲ್ಕನೇ ತ್ರೈಮಾಸಿಕದ ವೇಳೆ ಬಿಡುಗಡೆಗೊಳಿಸುವುದಾಗಿ ಹೇಳಿದೆ. ಈ ಇಲೆಕ್ಟ್ರಿಕ್ ಕಾರುಗಳನ್ನು ದೇಶದಲ್ಲಿಯೇ ಅಸೆಂಬಲ್ ಮಾಡಲಾಗುವುದೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News