×
Ad

ಉ.ಪ್ರದೇಶ ಚುನಾವಣೆ: ಪ್ರತಿಭಟನೆ ಸಂದರ್ಭ ಹೊಟ್ಟೆಗೆ ಪೊಲೀಸ್ ಒದೆ ತಿಂದಿದ್ದ ಸದಾಫ್ ಜಾಫರ್ ಈಗ ಕಾಂಗ್ರೆಸ್ ಅಭ್ಯರ್ಥಿ

Update: 2022-01-13 20:53 IST
ಸದಾಫ್ ಜಾಫರ್(photo:twitter/@sadafjafar)
 

ಹೊಸದಿಲ್ಲಿ,ಜ.13: ಲಕ್ನೋದಲ್ಲಿ 2019,ಡಿಸೆಂಬರ್‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳ ಸಂದರ್ಭ ಬಂಧಿಸಲ್ಪಟ್ಟ ಬಳಿಕ ಪುರುಷ ಪೊಲೀಸನಿಂದ ಹೊಟ್ಟೆಗೆ ಒದೆಯನ್ನು ತಿಂದಿದ್ದ ನಟಿ-ಸಾಮಾಜಿಕ ಕಾರ್ಯಕರ್ತೆ ಸದಾಫ್ ಜಾಫರ್ ಅವರು ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಉ.ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ದಂಗೆ ಮತ್ತು ಕೊಲೆ ಯತ್ನ ಆರೋಪಗಳಲ್ಲಿ ಬಂಧಿಸಲ್ಪಟ್ಟು ಸದ್ಯ ಜಾಮೀನಿನಲ್ಲಿ ಹೊರಗಿರುವ ಜಾಫರ್,ಉ.ಪ್ರದೇಶದ ಜನರ ಸಮಸ್ಯೆಗಳನ್ನು ಬಗೆಹರಿಸಲು ತಾನು ಹೋರಾಡುವುದಾಗಿ ಸುದ್ದಿಸಂಸ್ಥೆಗೆ ತಿಳಿಸಿದರು.

ತನ್ನ ಮೊದಲ ಚುನಾವಣಾ ಪ್ರಯತ್ನದಲ್ಲಿ ಹಾಲಿ ಶಾಸಕ,ಸಚಿವ ಹಾಗೂ ಮಾಜಿ ಸಂಸದ ಬೃಜೇಶ ಪಾಠಕ್ ಅವರ ವಿರುದ್ಧ ತನ್ನ ಸ್ಪರ್ಧೆ ಕಠಿಣವಾಗಬಹುದು ಎಂಬ ಅಭಿಪ್ರಾಯವನ್ನು ತಳ್ಳಿಹಾಕಿದ ಅವರು,ಹಾಲಿ ಶಾಸಕರೂ ಒಂದು ಸಮಯದಲ್ಲಿ ಹೆಸರಿಲ್ಲದವರಾಗಿದ್ದರು. ಪ್ರಜಾಪ್ರಭುತ್ವದಲ್ಲಿ,ಚುನಾವಣೆಯಲ್ಲಿ ನಿಜವಾದ ಶಕ್ತಿ ಜನರಲ್ಲಿ ಇರುತ್ತದೆಯೇ ಹೊರತು ಬೇರೊಬ್ಬರಲ್ಲಿ ಅಲ್ಲ. ಅವರು ನಿರ್ಧರಿಸಲಿದ್ದಾರೆ ಎಂದು ಹೇಳಿದರು.

2019ರ ಡಿಸೆಂಬರ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯು ನಿಯಂತ್ರಣ ಮೀರಿದಾಗ ಲಕ್ನೋದ ಪರಿವರ್ತನ್ ಚೌಕ್‌ನಲ್ಲಿ ಫೇಸ್‌ಬುಕ್ ಲೈವ್ ಸೆಷನ್ ಮಾಡುತ್ತಿದ್ದಾಗ ಜಾಫರ್ ಅವರನ್ನು ಬಂಧಿಸಲಾಗಿತ್ತು.

ಕಳೆದ ವರ್ಷದ ಜನವರಿಯಲ್ಲಿ ಅವರಿಗೆ ಜಾಮೀನು ನೀಡಿದ್ದ ನ್ಯಾಯಾಲಯವು, ಜಾಫರ್ ವಿರುದ್ಧ ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದ ಆರೋಪಗಳನ್ನು ಸಮರ್ಥಿಸುವ ಯಾವುದೇ ಸಾಕ್ಷಾಧಾರವನ್ನು ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ತನ್ನ ಆದೇಶದಲ್ಲಿ ಹೇಳಿತ್ತು.

ಉ.ಪ್ರದೇಶದಲ್ಲಿ ಕಾಂಗ್ರೆಸ್‌ನ ಉಸ್ತುವಾರಿಯನ್ನು ಹೊಂದಿರುವ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು,2017ರ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿಗೂ ಚುನಾವಣಾ ಟಿಕೆಟ್ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News