90 ದಲಿತರು ಸೇರಿದಂತೆ 300 ಅಭ್ಯರ್ಥಿಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ: ಬಿಎಸ್‌ಪಿ
ಲಕ್ನೋ,ಜ.13: ಉ.ಪ್ರದೇಶ ವಿಧಾನಸಭಾ ಚುನಾವಣೆಗೆ ತನ್ನ ಒಟ್ಟು 403 ಅಭ್ಯರ್ಥಿಗಳ ಪೈಕಿ ಕನಿಷ್ಠ 300 ಹೆಸರುಗಳನ್ನು ಬಿಎಸ್‌ಪಿ ಈಗಾಗಲೇ ಅಂತಿಮಗೊಳಿಸಿದ್ದು,ಇವರಲ್ಲಿ 90 ದಲಿತರು ಸೇರಿದ್ದಾರೆ. ಇತರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದಾಗ ದಲಿತ ಅಭ್ಯರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಮಿಶ್ರಾ ಅವರು ಗುರುವಾರ ಇಲ್ಲಿ ತಿಳಿಸಿದರು.
ಎದುರಾಳಿ ಪಕ್ಷಗಳನ್ನು ಟೀಕಿಸಿದ ಮಿಶ್ರಾ,ಬಿಜೆಪಿ ಮತ್ತು ಎಸ್‌ಪಿ ನಾಯಕರಲ್ಲಿ ಆತ್ಮವಿಶ್ವಾಸದ ಕೊರತೆಯಿಂದಾಗಿ ಆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿವೆ ಎಂದರು.
ಬ್ರಾಹ್ಮಣ ಮತ್ತು ಮುಸ್ಲಿಂ ಅಭ್ಯರ್ಥಿಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಮಿಶ್ರಾ,ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ಜನ್ಮದಿನವಾದ ಜ.15ರಂದು ಪಟ್ಟಿಯು ವಿಧ್ಯುಕ್ತವಾಗಿ ಘೋಷಣೆಯಾದ ಬಳಿಕ ಅದು ನಿಮಗೇ ಗೊತ್ತಾಗಲಿದೆ ಎಂದು ಉತ್ತರಿಸಿದರೆ,ಬ್ರಾಹ್ಮಣ ಮತ್ತು ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ ಎಂದು ಇನ್ನೋರ್ವ ಬಿಎಸ್‌ಪಿ ನಾಯಕರು ತಿಳಿಸಿದರು.
ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಮತ್ತು ಬ್ರಾಹ್ಮಣರನ್ನೊಳಗೊಂಡ ತನ್ನ 2007ರ ಗೆಲುವಿನ ಸೂತ್ರವನ್ನೇ ಬಿಎಸ್‌ಪಿ ಅನುಸರಿಸಲಿದೆ ಎಂದು ಮಾಯಾವತಿ ಈಗಾಗಲೇ ಪ್ರಕಟಿಸಿದ್ದಾರೆ. ಉ.ಪ್ರದೇಶದ ಜನಸಂಖ್ಯೆಯಲ್ಲಿ ಶೇ.20ಕ್ಕೂ ಅಧಿಕ ದಲಿತರಾಗಿದ್ದು,ಬ್ರಾಹ್ಮಣರು ಶೇ.13 ಮತ್ತು ಮುಸ್ಲಿಮರು ಸುಮಾರು ಶೇ.20ರಷ್ಟಿದ್ದಾರೆ.
ಗುರುವಾರ ಮಾಯಾವತಿಯವರು ಇಬ್ಬರು ಬಿಎಸ್‌ಪಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದರು. ಈ ಪೈಕಿ ಬುಧವಾರ ಕಾಂಗ್ರೆಸ್‌ನಿಂದ ಬಿಎಸ್‌ಪಿಗೆ ಜಿಗಿದಿದ್ದ ಸಯೀದ್ ಅವರು ಮಾಜಿ ಉ.ಪ್ರ.ಗೃಹಸಚಿವ ಸೈದುಝ್ಝಮಾನ್‌ರ ಪುತ್ರನಾಗಿದ್ದರೆ,ನೂಮಾನ್ ಮಸೂದ್ ಅವರು ಮಾಜಿ ಕೇಂದ್ರ ಸಚಿವ ರಶೀದ್ ಮಸೂದ್‌ರ ಸೋದರಳಿಯ ಮತ್ತು ಎಸ್‌ಪಿ ನಾಯಕ ಇಮ್ರಾನ್ ಮಸೂದ್‌ರ ಸೋದರನಾಗಿದ್ದಾರೆ.