ಉ.ಪ್ರದೇಶ ಚುನಾವಣೆ: ಯಾವುದೇ ರಾಜಕೀಯ ಪಕ್ಷದೊಂದಿಗೆ ಶಿವಸೇನೆ ಮೈತ್ರಿಯಿಲ್ಲ; ಸಂಜಯ್ ರಾವುತ್

Update: 2022-01-13 16:07 GMT
ಸಂಜಯ್ ರಾವುತ್ 

ಹೊಸದಿಲ್ಲಿ,ಜ.13: ಉ.ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷವು ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಶಿವಸೇನೆಯ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರು ಗುರುವಾರ ಇಲ್ಲಿ ತಿಳಿಸಿದರು. ಉ.ಪ್ರ.ಚುನಾವಣೆಗಾಗಿ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲು ರಾಜ್ಯಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್,‘ಬಿಜೆಪಿ,ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷದೊಂದಿಗೆ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ. ಸಮಾಜವಾದಿ ಪಕ್ಷದೊಂದಿಗೆ ನಾವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ. ಹೀಗಾಗಿ ನಾವು ಅವರೊಂದಿಗೆ ಸೇರುವುದಿಲ್ಲ. ಆದರೆ ನಾವು ಉ.ಪ್ರದೇಶದಲ್ಲಿ ಬದಲಾವಣೆಯನ್ನು ಬಯಸಿದ್ದೇವೆ ಮತ್ತು ಅದು ಸಂಭವಿಸುತ್ತಿದೆ ’ ಎಂದರು.

‘ಶಿವಸೇನೆ ಹಲವಾರು ವರ್ಷಗಳಿಂದ ಉ.ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ,ಆದರೆ ಚುನಾವಣೆಗಳು ಎದುರಾದಾಗ ಬಿಜೆಪಿಗೆ ಹಾನಿಯಾಗಬಹುದು ಎಂದು ನಾವು ಅವುಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈ ಸಲ ನಾವು ಉ.ಪ್ರದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ’ಎಂದರು.

ತನ್ನ ಪಕ್ಷವೂ ಅಯೋಧ್ಯೆ ಆಂದೋಲನದ ಭಾಗವಾಗಿತ್ತು ಎಂದು ಬಿಜೆಪಿಗೆ ನೆನಪಿಸಿದ ರಾವುತ್,‘ನಾವು ಮಥುರಾದಲ್ಲಿಯೂ ಆಂದೋಲನವನ್ನು ನಡೆಸಲಿದ್ದೇವೆ. ಆದರೆ ಸದ್ಯ ಉ.ಪ್ರ.ಚುನಾವಣೆಯಲ್ಲಿ ಹೋರಾಡಲಿದ್ದೇವೆ. ರೈತನಾಯಕ ರಾಕೇಶ್ ಟಿಕಾಯತ್ ಅವರನ್ನೂ ತಾನು ಭೇಟಿಯಾಗಲಿದ್ದು,ಅವರ ಅಭಿಪ್ರಾಯಗಳು ಮತ್ತು ಅವರು ಏನು ಬಯಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುತ್ತೇನೆ ’ಎಂದು ಹೇಳಿದರು.

ಅಯೋಧ್ಯೆಯಿಂದ ಆದಿತ್ಯನಾಥ ಸ್ಪರ್ಧೆಯ ಕುರಿತು ಮಾತನಾಡಿದ ಅವರು,‘ಅದು ಒಳ್ಳೆಯದು ಮತ್ತು ನಾವೂ ಅಯೋಧ್ಯೆಯಲ್ಲಿ ಸ್ಪರ್ಧಿಸುತ್ತೇವೆ. ನಾವು ಮಥುರಾದಲ್ಲಿಯೂ ಹೋರಾಡಲಿದ್ದೇವೆ. ನಾವು ಯೋಗಿ ವಿರುದ್ಧ ಸ್ಪರ್ಧಿಸುವುದಿಲ್ಲ,ಆದರೆ ಶಿವಸೇನೆ ಸ್ಪರ್ಧಿಸುತ್ತದೆ. ಯೋಗಿ ಆದಿತ್ಯನಾಥ ದೊಡ್ಡ ನಾಯಕರಾಗಿದ್ದರೆ ಅವರು ಎಲ್ಲಿಂದಲೂ ಸ್ಪರ್ಧಿಸಬಹುದು ಮತ್ತು ನಾವು ಅವರನ್ನು ಗೌರವಿಸುತ್ತೇವೆ. ಯಾವುದೇ ವ್ಯಕ್ತಿಯೊಂದಿಗೆ ನಮ್ಮ ಜಗಳವಿಲ್ಲ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News