ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಸಮಾಜವಾದಿ ಪಕ್ಷದ 2,500 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Update: 2022-01-14 18:40 GMT

ಲಕ್ನೋ, ಜ. 14: ಮಾದರಿ ನೀತಿ ಸಂಹಿತೆ ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘನೆಯ ಆರೋಪದಲ್ಲಿ ಸಮಾಜವಾದಿ ಪಕ್ಷದ 2,500 ಅಪರಿಚಿತ ಕಾರ್ಯಕರ್ತರ ವಿರುದ್ಧ ಲಕ್ನೋದ ಗೌತಮ್ ಪಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಬಿಜೆಪಿಯ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಹಾಗೂ ಇತರ ಶಾಸಕರು ಸಮಾಜವಾದಿ ಪಕ್ಷ ಸೇರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಅಪರಾಹ್ನ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಮಾಜವಾದಿ ಪಕ್ಷ ಪೂರ್ವಭಾವಿ ಅನುಮತಿ ಇಲ್ಲದೆ ವರ್ಚುವಲ್ ರ್ಯಾಲಿ ಆಯೋಜಿಸಿತ್ತು ಎಂದು ಲಕ್ನೋ ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ಹೇಳಿದ್ದಾರೆ.

‘‘ಮಾಹಿತಿ ಸ್ವೀಕರಿಸಿದ ಕೂಡಲೇ ಪೊಲೀಸರ ತಂಡವೊಂದನ್ನು ಸಮಾಜವಾದಿ ಪಕ್ಷದ ಕಚೇರಿಗೆ ಪೊಲೀಸ್ ತಂಡವೊಂದನ್ನು ಕಳುಹಿಸಿ ಕೊಡಲಾಗಿತ್ತು. ಅವರ ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. ‘‘ಇದು ಪಕ್ಷದ ಕಚೇರಿಯ ಒಳಗೆ ನಡೆಸಲಾದ ವರ್ಚುವಲ್ ಕಾರ್ಯಕ್ರಮ. ನಾವು ಯಾರಿಗೂ ಕರೆ ನೀಡಿರಲಿಲ್ಲ. ಆದರೆ ಜನರು ಆಗಮಿಸಿದ್ದಾರೆ. ಜನರು ಕೋವಿಡ್ ನಿಯಮಾವಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಿದ್ದಾರೆ’’ ಎಂದು ಸಮಾಜವಾದಿ ಪಕ್ಷದ ಉತ್ತರಪ್ರದೇಶ ಘಟಕದ ನರೇಶ್ ಉತ್ತಮ್ ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News