ಬಿಹಾರ: ವಿಷಪೂರಿತ ಮದ್ಯ ಸೇವಿಸಿ 4 ಮಂದಿ ಸಾವು, ತನಿಖೆ ಆರಂಭ
ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ಬಿಹಾರದ ನಳಂದಾದಲ್ಲಿ ನಾಲ್ಕು ಮಂದಿ ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು India Today ವರದಿ ಮಾಡಿದೆ.
ಮೃತರನ್ನು ಭಾಗೋ ಮಿಸ್ತ್ರಿ (55), ಮುನ್ನಾ ಮಿಸ್ತ್ರಿ (55), ಧರ್ಮೇಂದ್ರ (50) ಹಾಗೂ ಕಾಳಿಚರಣ್ ಮಿಸ್ತ್ರಿ ಎಂದು ಗುರುತಿಸಲಾಗಿದೆ. ನಳಂದದ ಸೊಹ್ಸರಾಯ್‌ನಲ್ಲಿರುವ ಚೋಟಾ ಪಹಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ನಕಲಿ ಮದ್ಯ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಸಾವಿಗೆ ಕಾರಣವನ್ನು ಜಿಲ್ಲಾಡಳಿತ ಇನ್ನೂ ಖಚಿತಪಡಿಸಿಲ್ಲ.
ತನಿಖೆ ಆರಂಭಿಸಲಾಗಿದ್ದು, ಡಿಎಸ್‌ಪಿ ಶಿಬ್ಲಿ ನೊಮಾನಿ ಈ ಪ್ರಕರಣದ ತನಿಖೆ ನಡೆಸಲಿದ್ದಾರೆ.
ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಸಮಸ್ತಿಪುರ್ ಮತ್ತು ಮುಝಾಫರ್‌ಪುರದಲ್ಲಿ ಮೂರು ಡಝನ್‌ಗಿಂತಲೂ ಹೆಚ್ಚು ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. ನಂತರ ಬಿಹಾರದಲ್ಲಿ ನಿಷೇಧ ಕಾನೂನಿನ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು.