"ನಿಮ್ಮದು ಕೊಳಕು ಬುದ್ಧಿ ಮತ್ತು ಅನೈತಿಕ ಪತ್ರಿಕೋದ್ಯಮ": ಅರ್ನಬ್ ಗೆ ಡಿಬೇಟ್ ನಲ್ಲೇ ಚಾಟಿಬೀಸಿದ ನಿವೃತ್ತ ಸೇನಾಧಿಕಾರಿ

Update: 2022-01-15 07:43 GMT
Photo: Screengrab

ಹೊಸದಿಲ್ಲಿ: ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಗೋಕುಲ್ ಚಂದ್ರನ್ ಅವರು ನೇರ ಪ್ರಸಾರ ಟಿವಿ ಕಾರ್ಯಕ್ರಮವೊಂದರಲ್ಲಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಗೋಕುಲ್ ಚಂದ್ರನ್ ಅವರು ಅರ್ನಬ್ ಅವರನ್ನು "ಕೊಳಕು ಮನಸ್ಸಿನ ವ್ಯಕ್ತಿ, ನೈತಿಕತೆಯಿಲ್ಲದ ಪತ್ರಿಕೋದ್ಯಮವನ್ನು ನಡೆಸುತ್ತಿದ್ದಾರೆ" ಎಂದು ಜರಿದಿದ್ದಾರೆ. ನಂತರ ಚಂದ್ರನ್ ಅವರನ್ನು ಮ್ಯೂಟ್ ಮಾಡಿ ಅವರನ್ನು ಕಾರ್ಯಕ್ರಮದಿಂದ ಕೈಬಿಡಲಾಗಿದೆ.

ಚರ್ಚೆಯ ವೇಳೆ ಗೋಸ್ವಾಮಿ ಅವರು ಸತತವಾಗಿ  'ವಾದ್ರಾ ಕಾಂಗ್ರೆಸ್' ಎಂದು ಹೇಳಿರುವುದು  ಚಂದ್ರನ್ ಅವರಿಗೆ ಆಕ್ರೋಶವುಂಟು ಮಾಡಿದಾಗ, "ಅದರಲ್ಲೇನು ನಿಂದನಾತ್ಮಕವಾಗಿದೆ?" ಎಂದು ಅರ್ನಬ್ ಪ್ರಶ್ನಿಸಿದ್ದಾರೆ.

ಚಂದ್ರನ್ ಅವರು "ವೈ ದಿ ಹೆಲ್ ಡು ಯು ಕಾಲ್ ವಾದ್ರಾ ಕಾಂಗ್ರೆಸ್?" ಎಂದು ಕೇಳಿದಾಗ ಅರ್ನಬ್ "ವೈ ದಿ ಹೆಲ್ ಡಿಡ್ ಐ ಕಾಲ್ ವಾದ್ರಾ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಈ ಹಿಂದೆ ಇಂದಿರಾ ಕಾಂಗ್ರೆಸ್ ಎಂದು ಕರೆಯಲ್ಪಡುತ್ತಿದ್ದರೆ ಈಗ ವಾದ್ರಾ ಕಾಂಗ್ರೆಸ್ ಎಂದು ಜನಪ್ರಿಯವಾಗಿದೆ" ಎಂದರು.

ಇದರಿಂದ ತೃಪ್ತರಾಗದ ಚಂದ್ರನ್ "ನಿಮ್ಮ ಮನಸ್ಸಿನಲ್ಲಿ ಕೊಳಕು ತುಂಬಿದೆ ಹಾಗೂ ನೀವು ನೈತಿಕತೆಯಿಲ್ಲದ ಪತ್ರಿಕೋದ್ಯಮ ನಡೆಸುತ್ತಿದ್ದೀರಿ, ಈ ಕಾರಣದಿಂದ ಈ ಹೆಸರು ಬಳಸುತ್ತಿದ್ದೀರಿ" ಎಂದರು. ತಿರುಗಿ ಅವರ ವಿರುದ್ಧ ಹರಿಹಾಯ್ದ ಅರ್ನಬ್ ಅವರನ್ನು ಮ್ಯೂಟ್ ಮಾಡಲು ಹೇಳುತ್ತಾರೆ. ನಂತರ ಪರದೆಯಿಂದ ಚಂದ್ರನ್ ಮಾಯವಾಗುತ್ತಾರೆ.  ನಾನು ಕಾರ್ಯಕ್ರಮದಿಂದ ಹೊರನಡೆಯಲು ನಿರ್ಧರಿಸಿದೆ ಎಂದು ನಂತರ ಚಂದ್ರನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News