×
Ad

ಭಟ್ಕಳದಲ್ಲಿ ಕಠಿಣ ಕೋವಿಡ್ ನಿಯಮ: ಜಾತ್ರೆ ಉತ್ಸವಗಳಿಗಿಲ್ಲ ಅವಕಾಶ; ಸಹಾಯಕ ಆಯುಕ್ತೆ ಮಮತಾ ದೇವಿ

Update: 2022-01-15 18:41 IST

ಭಟ್ಕಳ: ರಾಜ್ಯ ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ದೇವಾಲಯಗಳಲ್ಲಿ ಒಳಾಂಗಣ ಪೂಜೆಗಳಿಗೆ ಅವಕಾಶವಿದ್ದು ಜಾತ್ರೆ, ಉತ್ಸವಾದಿಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಹೇಳಿದರು. 

ಅವರು ತಮ್ಮ ಕಚೇರಿಯಲ್ಲಿ ಮುರ್ಡೇಶ್ವರ ಜಾತ್ರೆಯ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು. 

ಸರಕಾರದ ಈ ಹಿಂದಿನ ಮಾರ್ಗಸೂಚಿಯಂತೆ ತಾಲೂಕಿನ ಮುರ್ಡೇಶ್ವರ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿತ್ತು ಆದರೆ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದ್ದು, ಕೋವಿಡ್ ತಡೆಗೆ ಇನ್ನಷ್ಟು ಕಠಿಣ ನಿಯಮಗಳನ್ನು ಹೇರಲು ಜಿಲ್ಲಾಡಳಿತ ತೀರ್ಮಾನಿಸಿದ್ದರಿಂದ ಮುರ್ಡೇಶ್ವರ ಜಾತ್ರೆಯನ್ನು ಕೇವಲ ಧಾರ್ಮಿಕ ವಿಧಿವಿಧಾನಗಳಿಗಷ್ಟೇ ಸೀಮಿತಗೊಳಿಸಲಾಗಿದೆ ಎಂದರು.

ಮುರ್ಡೇಶ್ವರ ಬ್ರಹ್ಮರಥೋತ್ಸವ ರದ್ದುಪಡಿಸಿದ್ದು, ಜಾತ್ರೆಗೆ ಬರುವವರಿಗೆ ಎರಡು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ಕೇವಲ 50 ಮಂದಿಗಷ್ಟೇ ಅವಕಾಶವಿದ್ದು ಕೋವಿಡ್ ಲಸಿಕೆ, ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ ಎಂದೂ ಅವರು ಹೇಳಿದರು. ಜಾತ್ರೆಯ ಪ್ರಯುಕ್ತ ಯಾವುದೇ ಜಾತ್ರಾ ಅಂಗಡಿ, ವ್ಯಾಪಾರ, ಮನೊರಂಜನಾ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ ಎಂದರು.

ಮಾವಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಸದಸ್ಯರು ಜಾತ್ರಾ ಮಳಿಗೆಗೆ ಅವಕಾಶ ಕೊಡುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಸಭೆಗೆ ತಿಳಿಸಿದಾಗ, ಅಂತಹ ಯಾವುದೇ ಅವಕಾಶ ಇಲ್ಲ, ಇದನ್ನು ಮೀರಿ ಜಾತ್ರಾ ಅಂಗಡಿಗೆ ಅವಕಾಶ ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದರು. 

ತಾಲೂಕಿನಲ್ಲಿ ಜ.23ರಿಂದ 9 ದಿನಗಳ ಕಾಲ ನಡೆಯಲಿರುವ ಅದ್ದೂರಿ ಸೋಡಿಗದ್ದೆ ಮಹಾಸತಿ ಜಾತ್ರೆಯನ್ನು ಕೂಡಾ ರದ್ದುಪಡಿಸಲಾಗಿದ್ದು ಇದೇ ನಿಯಮ ಸೋಡಿಗದ್ದೆ ದೇವಸ್ಥಾನಕ್ಕೂ ಅನ್ವಯಿಸಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. 

ಸರಕಾರದ ಹೊಸ ಮಾರ್ಗಸೂಚಿಯಂತೆ ಎಲ್ಲರೂ ನಡೆದುಕೊಳ್ಳಬೇಕಾಗಿದ್ದು ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು. 

ಸಭೆಯಲ್ಲಿ ತಹಸೀಲ್ದಾರ ಎಸ್. ರವಿಚಂದ್ರ ಭಟ್ಕಳ, ಗ್ರಾಮಾಂತರ ವೃತ್ತ ನಿರೀಕ್ಷಕ ಮಹಾಬಲೇಶ್ವರ ನಾಯ್ಕ, ಮುರ್ಡೇಶ್ವರ ಸಬ್ ಇನ್ಸಪೆಕ್ಟರ್ ರವೀಂದ್ರ ಬಿರಾದಾರ, ಮ್ಹಾತೋಬಾರ ಶ್ರೀ ಮುರ್ಡೇರ್ವಶರ ದೇವಸ್ಥಾನದ ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News