ಇನ್ನು ಮುಂದೆ ಯಾವುದೇ ಬಿಜೆಪಿ ಶಾಸಕ, ಸಚಿವರಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ: ಅಖಿಲೇಶ್ ಯಾದವ್

Update: 2022-01-15 14:43 GMT

ಲಕ್ನೋ, ಜ.15: ಮುಂಬರುವ ಉ.ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಆದಿತ್ಯನಾಥ ಸಂಪುಟವನ್ನು ತೊರೆದ ಇಬ್ಬರು ಸಚಿವರು ಸೇರಿದಂತೆ ಏಳು ಮಾಜಿ ಶಾಸಕರನ್ನು ಶುಕ್ರವಾರ ಪಕ್ಷಕ್ಕೆ ಸ್ವಾಗತಿಸಿದ್ದ ಸಮಾಜವಾದಿ ಪಕ್ಷ (ಎಸ್ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು,‌ ತನ್ನ ಪಕ್ಷದಲ್ಲಿ ಯಾವುದೇ ಬಿಜೆಪಿ ಶಾಸಕ, ಸಚಿವರಿಗೆ ಇನ್ನು ಮುಂದೆ ಜಾಗವಿಲ್ಲ ಎಂದು ಶನಿವಾರ ಇಲ್ಲಿ ಹೇಳಿದರು.

"ನಾನು ಇನ್ನಷ್ಟು ಬಿಜೆಪಿ ಶಾಸಕರು ಅಥವಾ ಸಚಿವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರು (ಬಿಜೆಪಿ) ಬಯಸಿದರೆ ತಮ್ಮ ನಾಯಕರಿಗೆ ಟಿಕೆಟ್ಗಳನ್ನು ನಿರಾಕರಿಸಬಹುದು" ಎಂದು ಅಖಿಲೇಶ್ ಸುದ್ದಿಗಾರರಿಗೆ ತಿಳಿಸಿದರು.

ಅಖಿಲೇಶ್ ಶುಕ್ರವಾರ ಇಬ್ಬರು ಮಾಜಿ ಸಚಿವರು ಮತ್ತು ಪ್ರಮುಖ ಒಬಿಸಿ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಮ್ ಸಿಂಗ್ ಸೈನಿ ಹಾಗೂ ಐವರು ಇತರ ಬಿಜೆಪಿ ಶಾಸಕರು ಮತ್ತು ಬಿಜೆಪಿಯ ಮಿತ್ರಪಕ್ಷ ಅಪ್ನಾ ದಳದ ಓರ್ವ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಈ ವಾರದಲ್ಲಿ ಕೇವಲ 72 ಗಂಟೆಗಳ ಅವಧಿಯಲ್ಲಿ ಬಿಜೆಪಿ ಮತ್ತು ಆದಿತ್ಯನಾಥ ಸರಕಾರದಿಂದ ನಿರ್ಗಮಿಸಿರುವ ಒಬಿಸಿ ನಾಯಕರ ದಂಡು ಮತ್ತೆ ಅಧಿಕಾರಕ್ಕೇರುವ ಬಿಜೆಪಿಯ ಪ್ರಯತ್ನಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಪರಿಗಣಿಸಲಾಗುತ್ತಿದೆ.

ಮೌರ್ಯ ಮತ್ತು ಸೈನಿ ಜೊತೆಗೆ ಐವರು ಬಿಜೆಪಿ ಶಾಸಕರಾದ ರೋಶನ್ ಲಾಲ್ ವರ್ಮಾ,‌ ಬೃಜೇಶ್ ಪ್ರಜಾಪತಿ, ಮುಕೇಶ್ ವರ್ಮಾ, ವಿನಯ್ ಶಾಕ್ಯ ಮತ್ತು ಭಗವತಿ ಸಾಗರ್ ಅವರೂ ಶುಕ್ರವಾರ ಎಸ್ಪಿಗೆ ಸೇರ್ಪಡೆಗೊಂಡಿದ್ದಾರೆ. ಅಪ್ನಾ ದಳದ ಶಾಸಕ ಚೌಧರಿ ಅಮರ್ ಸಿಂಗ್ ಕೂಡ ಎಸ್ಪಿ ಸೇರಿದ್ದಾರೆ.

ಬಿಜೆಪಿಯನ್ನು ತೊರೆದಿರುವ ಮೂರನೇ ಸಚಿವ ದಾರಾ ಸಿಂಗ್ ಚೌಹಾಣ್ ಅವರೂ ಶೀಘ್ರವೇ ಎಸ್ಪಿಗೆ ಸೇರಲಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಬೆಳಿಗ್ಗೆ ತನ್ನ ಆಜಾದ್ ಸಮಾಜ್ ಪಾರ್ಟಿ ಮತ್ತು ಎಸ್ಪಿ ನಡುವಿನ ಸ್ಥಾನ ಹೊಂದಾಣಿಕೆ ಮಾತುಕತೆಗಳು ವಿಫಲಗೊಂಡಿವೆ ಎಂದು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಅಖಿಲೇಶರ ಈ ಘೋಷಣೆ ಹೊರಬಿದ್ದಿದೆ.
‘ನಾವು ಇನ್ನು ಮುಂದೆ ಯಾವುದೇ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಜನರನ್ನು ಒಟ್ಟುಗೂಡಿಸಲು ನಾವು ಬಹಳಷ್ಟು ತ್ಯಾಗ ಮಾಡಿದ್ದೇವೆ,ಆದರೆ ಈಗ ಬೇರೆ ಯಾರನ್ನೂ ಸೇರಿಸಿಕೊಳ್ಳಲು ಅವಕಾಶವಿಲ್ಲ ’ ಎಂದು ಅಖಿಲೇಶ್ ಹೇಳಿದರು.

ಅಖಿಲೇಶ್‌ ಗೆ ದಲಿತರ ಮತಗಳು ಬೇಕಿಲ್ಲ ಎಂದು ಆಜಾದ್ ಟೀಕಿಸಿದ್ದಾರೆ. ಫೆಬ್ರವರಿ- ಮಾರ್ಚ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಅಖಿಲೇಶ ಬಿಜೆಪಿಯನ್ನು ಸೋಲಿಸಲು ಯಾದವೇತರ ಒಬಿಸಿ ಸಮುದಾಯಗಳ ಮೇಲೆ ಪ್ರಭಾವ ಹೊಂದಿರುವ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವನ್ನು ರಚಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News