2007ರ ಮಾವೋವಾದಿ ಪ್ರಕರಣ: ಬಂಧನದ 14 ವರ್ಷಗಳ ಬಳಿಕ ಮಾಜಿ ಪತ್ರಕರ್ತ ರಾಹಿ ಖುಲಾಸೆ

Update: 2022-01-15 16:38 GMT
Screengrab of former journalist Prashant Rahi. | Satyen K Bordoloi via Youtube
 

ಹೊಸದಿಲ್ಲಿ, ಜ.15: ಮಾವೋವಾದಿಗಳೆಂಬ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಮಾಜಿ ಪತ್ರಕರ್ತ ಪ್ರಶಾಂತ ರಾಹಿ ಮತ್ತು ಇತರ ಮೂವರನ್ನು ಉತ್ತರಾಖಂಡದ ಉಧಮಸಿಂಗ್ ನಗರ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ 2007ರಲ್ಲಿ ಬಂಧಿಸಲ್ಪಟ್ಟಿದ್ದ ರಾಹಿ ಅವರು 2011ರಲ್ಲಿ ಜಾಮೀನು ಪಡೆದಿದ್ದರು.

ಆರೋಪಿಗಳ ಅಪರಾಧವನ್ನು ಸಂಶಯಾತೀತವಾಗಿ ಸಾಬೀತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ನ್ಯಾ.ಪ್ರೇಮಸಿಂಗ್ ಖಿಮಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

2007ರಲ್ಲಿ ದೇಶದ್ರೋಹ, ದಂಗೆಗಳಿಗೆ ಪ್ರಚೋದನೆ ಮತ್ತು ಸಂಚಿಗೆ ಸಂಬಂಧಿಸಿದ ಐಪಿಸಿ ಕಲಮ್ಗಳಡಿ ರಾಹಿ,ಗೋಪಾಲ ದತ್ತ ಭಟ್ಟ, ಖಿಮ್ ಸಿಂಗ್ ಬೋರಾ ಮತ್ತು ದೇವೇಂದ್ರ ಚಮ್ಯಾಲ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರು ‘ಭಯೋತ್ಪಾದಕ ಗ್ಯಾಂಗ್’ನ ಸದಸ್ಯರಾಗಿದ್ದಾರೆ ಎಂದು ಆರೋಪಿಸಲಾಗಿತ್ತು ಮತ್ತು ಬಳಿಕ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ಹೇರಲಾಗಿತ್ತು.

ಶುಕ್ರವಾರ ತೀರ್ಪಿನಲ್ಲಿ ಪೊಲೀಸ್ ತನಿಖೆಯಲ್ಲಿನ ಹಲವಾರು ಲೋಪಗಳನ್ನು ಬೆಟ್ಟು ಮಾಡಿರುವ ನ್ಯಾಯಾಲಯವು,ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿತ್ತು ಎನ್ನಲಾದ ನಿಷೇಧಿತ ಸಾಹಿತ್ಯವನ್ನು ಹಾಜರು ಪಡಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದೆ.
ಆರೋಪಿಗಳ ಖುಲಾಸೆಯ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಸರಕಾರಿ ಅಭಿಯೋಜಕ ಲಕ್ಷ್ಮಿನಾರಾಯಣ ಪಟ್ವಾ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News