ನ್ಯಾಯಾಲಯದ ತೀರ್ಪಿನ ಬಳಿಕ ಆಸ್ಟ್ರೇಲಿಯದಿಂದ ದುಬೈ ವಿಮಾನ ಏರಿದ ನೊವಾಕ್ ಜೊಕೊವಿಕ್

Update: 2022-01-16 11:58 GMT
Photo: AP

ಮೆಲ್ಬೋರ್ನ್, ಜ.16: ಕೋವಿಡ್-19 ವಿರುದ್ಧ ಲಸಿಕೆ ಹಾಕದಿರುವ ನೊವಾಕ್ ಜೊಕೊವಿಕ್  ನಿರ್ಧಾರವು ದೇಶಕ್ಕೆ ಅಪಾಯವನ್ನುಂಟು ಮಾಡಿದೆ ಎಂಬ ಕಾರಣಕ್ಕಾಗಿ ಜೊಕೊವಿಕ್ ವೀಸಾವನ್ನು ರದ್ದುಗೊಳಿಸುವ ಆಸ್ಟ್ರೇಲಿಯ ಸರಕಾರದ ನಿರ್ಧಾರವನ್ನು ಫೆಡರಲ್ ನ್ಯಾಯಾಲಯವು ಎತ್ತಿ ಹಿಡಿದ ನಂತರ ಟೆನಿಸ್ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್ ರವಿವಾರ ಆಸ್ಟ್ರೇಲಿಯಾದಿಂದ ಹೊರಡಲು ವಿಮಾನ ಏರಿದರು.

ಮೂವರು ನ್ಯಾಯಾಧೀಶರ ಪೀಠದ ಸರ್ವಾನುಮತದ ತೀರ್ಪು ಆಸ್ಟ್ರೇಲಿಯನ್ ಓಪನ್‌ನಲ್ಲಿ ದಾಖಲೆಯ 21 ನೇ ಗ್ರ್ಯಾನ್  ಸ್ಲಾಮ್ ಗೆಲ್ಲಬೇಕೆಂಬ  ಜೊಕೊವಿಕ್ ಅವರ ವಿಶ್ವಾಸಕ್ಕೆ ಧಕ್ಕೆ ತಂದಿದೆ.

ತೀರ್ಪಿನ ಕೆಲವೇ ಗಂಟೆಗಳ ನಂತರ ಸರ್ಬಿಯಾದ ಆಟಗಾರ ರವಿವಾರ ಸಂಜೆ ಮೆಲ್ಬೋರ್ನ್‌ನಿಂದ ದುಬೈಗೆ ಹೋಗುವ ಎಮಿರೇಟ್ಸ್ ವಿಮಾನವನ್ನು ಹತ್ತಿದರು ಎಂದು ರಾಯಿಟರ್ಸ್ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ವಿಶ್ವದ ಅಗ್ರಮಾನ್ಯ ಆಟಗಾರ ಜೊಕೊವಿಕ್ ಅವರನ್ನು ಜನವರಿ 6 ರಂದು ವಲಸೆ ಅಧಿಕಾರಿಗಳು ಮೊದಲು ಬಂಧಿಸಿದರು. ಜನವರಿ 10 ರಂದು ಜೊಕೊವಿಕ್ ರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿತು. ಜೊಕೊವಿಕ್ ಶನಿವಾರ ಮತ್ತೆ ಬಂಧನಕ್ಕೊಳಗಾದರು.

ಸೋಮವಾರದಿಂದ ಆರಂಭವಾಗುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಜೊಕೊವಿಕ್  ತೀವ್ರ ನಿರಾಶೆ ವ್ಯಕ್ತಪಡಿಸಿದರು.

"ನಾನು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ ಹಾಗೂ  ದೇಶದಿಂದ ನಿರ್ಗಮಿಸುವ ಸಂಬಂಧ ಸಂಬಂಧಿತ ಅಧಿಕಾರಿಗಳೊಂದಿಗೆ ಸಹಕರಿಸುತ್ತೇನೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ ಜೊಕೊವಿಕ್ ಪಂದ್ಯಾವಳಿಗೆ ಶುಭ ಹಾರೈಸಿದರು.

ವಲಸೆ ಸಚಿವ ಅಲೆಕ್ಸ್ ಹಾಕ್ ಅವರು ತನ್ನ  ವೀಸಾವನ್ನು ರದ್ದುಪಡಿಸಲು ವಿವೇಚನಾ ಅಧಿಕಾರವನ್ನು ಬಳಸುವುದರ ವಿರುದ್ಧ 34 ವರ್ಷದ ಜೊಕೊವಿಕ್ ಅವರು ನ್ಯಾಯಾಲಯಕ್ಕೆ  ಮೇಲ್ಮನವಿ ಸಲ್ಲಿಸಿದ್ದರು. ಜೊಕೊವಿಕ್ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು. ಏಕೆಂದರೆ ಅವರ ಉಪಸ್ಥಿತಿಯು ಆಸ್ಟ್ರೇಲಿಯಾದಲ್ಲಿ ಲಸಿಕೆ ವಿರೋಧಿ ಭಾವನೆಯನ್ನು ಉತ್ತೇಜಿಸುತ್ತದೆ ಎಂದು ಸಚಿವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News