ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ದಸಂಸ ಆಗ್ರಹ

Update: 2022-01-16 15:54 GMT

ಉಡುಪಿ, ಜ.15: ಇತ್ತೀಚೆಗೆ ಬೈಂದೂರಿನ ನಂದನವನ ಗ್ರಾಮದ ಹಳೆ ಲಕ್ಷ್ಮೀ ಸಿನಿಮಾ ಮಂದಿರದ ಬಳಿ ಪರಿಶಿಷ್ಟ ಜಾತಿಗೆ ಸೇರಿದ ರವಿಚಂದ್ರ ಎಂಬವರ ಮೇಲೆ ಅಮಾನುಷ ಹಲ್ಲೆ ನಡೆಸಿ, ತಲೆಮರೆಸಿಕೊಂಡಿರುವ ಆರೋಪಿ ಸುರೇಶ್ ಪೂಜಾರಿ ಕಾಡಿನತಾರ್‌ ನನ್ನು ತಕ್ಷಣ ಬಂಧಿಸಬೇಕೆಂದು ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ.

ಕುಂದಾಪುರದಲ್ಲಿ ನ್ಯಾಯಾಲಯದ ಸಿಬ್ಬಂದಿಯಾಗಿರುವ ಆರೋಪಿ ಸುರೇಶ್ ಪೂಜಾರಿ, ಡಿ.27ರಂದು ಬೈಂದೂರಿನ ನಂದನವನ ಗ್ರಾಮದ ಹಳೆ ಲಕ್ಷ್ಮೀ ಸಿನಿಮಾ ಮಂದಿರದ ಬಳಿ ಪರಿಶಿಷ್ಟ ಜಾತಿಗೆ ಸೇರಿದ ರವಿಚಂದ್ರ ಎಂಬವರಿಗೆ ತಲವಾರಿನಿಂದ ಕಡಿದು ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿ ಜಯನ್ ಮಲ್ಪೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದೀಗ ಆರೋಪಿ ಪರಾರಿಯಾಗಿದ್ದು, ನ್ಯಾಯಾಲಯದ ಕರ್ತವ್ಯಕ್ಕೂ ಅನಧಿಕೃತವಾಗಿ ಗೈರುಹಾಜರಾಗಿದ್ದಾನೆ. ಅಲ್ಲದೇ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣ ನಡೆದು 15 ದಿನಗಳು ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಆದ್ದರಿಂದ ಆರೋಪಿಯನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳುವಂತೆ ಜಯನ್ ಮಲ್ಪೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದು, ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News