ಶಾಲೆಗಳನ್ನು ತೆರೆಯುವುದಕ್ಕೂ ಕೊರೋನ ಹರಡುವುದಕ್ಕೂ ಸಂಬಂಧವಿಲ್ಲ: ವಿಶ್ವಬ್ಯಾಂಕ್ ಅಧಿಕಾರಿ

Update: 2022-01-16 17:56 GMT

ವಾಷಿಂಗ್ಟನ್, ಜ.16: ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಮತ್ತು ಹೊಸ ಅಲೆಗಳಿದ್ದರೂ ಕೂಡಾ ಶಾಲೆಗಳನ್ನು ಮುಚ್ಚುವುದು ಅಂತಿಮ ಆಯ್ಕೆಯಾಗಿರಬೇಕು ಎಂದು ವಿಶ್ವಬ್ಯಾಂಕ್‌ನ ಜಾಗತಿಕ ಶಿಕ್ಷಣ ನಿರ್ದೇಶಕ ಜೈಮ್ ಸಾವೆದ್ರ ಹೇಳಿದ್ದಾರೆ.

    ಶಾಲೆಗಳನ್ನು ಮತ್ತೆ ತೆರೆದಿರುವುದು ಕೊರೋನ ಸೋಂಕು ಪ್ರಕರಣ ಉಲ್ಬಣಿಸಲು ಕಾರಣವಾಗಿದೆ ಮತ್ತು ಶಾಲೆಗಳು ಸುರಕ್ಷಿತ ಪ್ರದೇಶವಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಶಾಲೆಗಳನ್ನು ತೆರೆಯುವುದಕ್ಕೂ ಕೊರೋನ ಸೋಂಕು ಹರಡುವುದಕ್ಕೂ ಯಾವುದೇ ಸಂಬಂಧವಿಲ್ಲ . ಮಕ್ಕಳಿಗೆ ಲಸಿಕೆ ಹಾಕಿದ ಬಳಿಕ ಶಾಲೆಗಳನ್ನು ತೆರೆಯಬೇಕು ಎಂಬುದು ವಿವೇಚನಾರಹಿತ ಸಲಹೆಯಾಗಿದೆ ಮತ್ತು ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದವರು ಹೇಳಿದ್ದಾರೆ. ಸಾವೆದ್ರ ಮತ್ತವರ ತಂಡ ಶೈಕ್ಷಣಿಕ ಕ್ಷೇತ್ರದ ಮೇಲೆ ಕೊರೋನ ಸೋಂಕಿನ ಪರಿಣಾಮದ ಬಗ್ಗೆ ಅಧ್ಯಯನ ನಡೆಸುತ್ತಿದೆ.

ವಿಶ್ವಬ್ಯಾಂಕ್ ನಡೆಸಿದ ಹಲವು ಅಧ್ಯಯನಗಳ ಪ್ರಕಾರ, ಶಾಲೆಗಳನ್ನು ತೆರೆದರೆ ಮಕ್ಕಳ ಆರೋಗ್ಯದ ಮೇಲಾಗುವ ಪರಿಣಾಮ ಅತ್ಯಲ್ಪ, ಆದರೆ ಮುಚ್ಚಿದರೆ ಆಗುವ ತೊಂದರೆ ಅಪಾರ ಎಂದು ಕಂಡುಬಂದಿದೆ. ರೆಸ್ಟಾರೆಂಟ್, ಬಾರ್‌ಗಳನ್ನು ತೆರೆದಿಟ್ಟು ಶಾಲೆಗಳನ್ನು ಮುಚ್ಚುವುದು ವಿವೇಚನಾರಹಿತ ನಿರ್ಧಾರವಾಗಿದೆ. ಇದಕ್ಕೆ ಯಾವುದೇ ಸಮರ್ಥನೆಯಿಲ್ಲ ವಾಷಿಂಗ್ಟನ್‌ನಿಂದ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

   2020ರಲ್ಲಿ ನಾವು ಅಜ್ಞಾನವೆಂಬ ಸಾಗರದಲ್ಲಿ ಪ್ರಯಾಣಿಸುತ್ತಿದ್ದೆವು. ಸೋಂಕನ್ನು ಎದುರಿಸುವ ಅತ್ಯುತ್ತಮ ವಿಧಾನ ಯಾವುದು ಎಂಬುದು ಯಾರಿಗೂ ತಿಳಿದಿರಲಿಲ್ಲ ಮತ್ತು ವಿಶ್ವದ ಬಹುತೇಕ ದೇಶಗಳ ತಕ್ಷಣದ ಪ್ರತಿಕ್ರಿಯೆ ಎಂದರೆ ಶಾಲೆಗಳನ್ನು ಮುಚ್ಚಿಬಿಡುವುದು. ಆ ಬಳಿಕ ಸಮಯ ಮುಂದೆ ಸಾಗಿದೆ ಮತ್ತು 2020 ಹಾಗೂ 2021ರಲ್ಲಿ ಸೋಂಕಿನ ಹಲವು ಅಲೆಗಳು ಎದ್ದರೂ ವಿಶ್ವದಲ್ಲಿ ಹಲವು ದೇಶಗಳು ಶಾಲೆಗಳನ್ನು ತೆರೆದಿದ್ದವು. ಶಾಲೆಗಳನ್ನು ತೆರೆಯುವುದರಿಂದ ವೈರಸ್ ಪ್ರಸಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ನಾವು ನಡೆಸಿದ ಅಧ್ಯಯದಲ್ಲಿ ತಿಳಿದುಬಂದಿದೆ. ಶಾಲೆಗಳನ್ನು ಮುಚ್ಚಿದ್ದರೂ ಹಲವು ದೇಶಗಳಲ್ಲಿ ಸೋಂಕಿನ ಹಲವು ಅಲೆಗಳು ಎದ್ದಿದ್ದವು ಎಂಬುದನ್ನು ಗಮನಿಸಬೇಕು ಎಂದವರು ಹೇಳಿದ್ದಾರೆ.

   ಮಕ್ಕಳು ಸೋಂಕಿಗೆ ಒಳಗಾಗಬಹುದಾದರೂ ಸಾವಿನ ಪ್ರಕರಣ ಮತ್ತು ಗಂಭೀರ ಕಾಯಿಲೆಯ ಲಕ್ಷಣ ಬಹಳ ಅಪರೂಪವಾಗಿದೆ. ಮಕ್ಕಳಿಗೆ ಅಪಾಯದ ಪ್ರಮಾಣ ಅಲ್ಪವಾಗಿದೆ ಆದರೆ, ಶಾಲೆಗಳನ್ನು ಮುಚ್ಚಿದರೆ ಆಗುವ ತೊಂದರೆ ಅಪಾರವಾಗಿದೆ. ಮಕ್ಕಳು ಲಸಿಕೆ ಪಡೆದ ಬಳಿಕವೇ ಶಾಲೆ ಆರಂಭಿಸುವುದಾಗಿ ಷರತ್ತು ಮುಂದಿರಿಸಿದ ಯಾವುದೇ ದೇಶಗಳಿಲ್ಲ. ಯಾಕೆಂದರೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಮತ್ತು ಸಾರ್ವಜನಿಕ ನೀತಿಯ ದೃಷ್ಟಿಕೋನದಲ್ಲಿ ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಜೈಮ್ ಸಾವೆದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News