ಫ್ರಾನ್ಸ್: ಹೊಸ ಲಸಿಕೆ ಪಾಸ್ ನಿಯಮ ವಿರೋಧಿಸಿ ಬೃಹತ್ ಪ್ರತಿಭಟನೆ‌

Update: 2022-01-16 18:08 GMT

 ಪ್ಯಾರಿಸ್, ಜ.16: ಲಸಿಕೆ ಪಡೆದವರಿಗೆ ನೀಡುವ ಆರೋಗ್ಯ ಕಾರ್ಡ್ ಅನ್ನು ಲಸಿಕೆ ಪಾಸ್ ಎಂದು ಪರಿಗಣಿಸುವ ನೂತನ ಕಾಯ್ದೆಯನ್ನು ಜಾರಿಗೊಳಿಸುವ ಫ್ರಾನ್ಸ್ ಸರಕಾರದ ನಿರ್ಧಾರವನ್ನು ವಿರೋಧಿಸಿ ಶನಿವಾರ ಫ್ರಾನ್ಸ್ ನ ಹಲವು ನಗರಗಳಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಯಾಗಿದೆ.
 
ಆದರೆ ಕಳೆದ ವಾರಾಂತ್ಯ ನಡೆದಿದ್ದ ಪ್ರತಿಭಟನೆಗಿಂತ ಈ ಬಾರಿ ಕಡಿಮೆ ಜನ ಸೇರಿದ್ದರು. ಕಳೆದ ವಾರದ ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಜನ ಸೇರಿದ್ದರೆ ಈ ಬಾರಿ 54,000 ಮಂದಿ ಪಾಲ್ಗೊಂಡಿದ್ದರು. ಪ್ಯಾರಿಸ್‌ನಲ್ಲಿ ಐಫಲ್ ಗೋಪುರದ ಬಳಿಯಿಂದ ಆರಂಭವಾದ ಪ್ರತಿಭಟನಾ ರ್ಯಾಲಿಗೆ ಯುರೋಪಿಯನ್ ಯೂನಿಯನ್ ವಿರೋಧಿ ಬಲಪಂಥೀಯ ನಾಯಕಿ, ಅಧ್ಯಕ್ಷೀಯ ಅಭ್ಯರ್ಥಿ ಫ್ಲೋರಿಯಾನ್ ಫಿಲಿಪ್ಪೋಟ್ ಚಾಲನೆ ನೀಡಿದ್ದರು. ಬೋರ್ಡಿಯಕ್ಸ್, ಟೌಲೋಸ್, ಲಿಲ್ಲೆ ಮುಂತಾದ ಪ್ರಮುಖ ನಗರಗಳಲ್ಲೂ ಪ್ರತಿಭಟನೆ ನಡೆದಿದೆ. ‘ಲಸಿಕೆ ಬೇಡ ಎನ್ನಿ’ ‘ವೈರಸ್ ನಿಯಂತ್ರಣ ಅವರ ಉದ್ದೇಶವಲ್ಲ, ನಿಮ್ಮನ್ನು ನಿಯಂತ್ರಿಸುವ ಉದ್ದೇಶ ಅವರದ್ದು’
  
ಮುಂತಾದ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಲಸಿಕೆ ಪಡೆಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಲು ಅವಕಾಶ ನಿರಾಕರಿಸಲ್ಪಟ್ಟ ವಿಶ್ವದ ಅಗ್ರಗಣ್ಯ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ರನ್ನು ಬೆಂಬಲಿಸುವ ಘೋಷಣೆಯೂ ಮೊಳಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಲಸಿಕೆ ಪಡೆಯದವರಿಗೆ ಅನ್ವಯಿಸುವ ಕಠಿಣ ನಿರ್ಬಂಧ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಈ ತಿಂಗಳ ಆರಂಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಘೋಷಿಸಿದ ಬಳಿಕ ಲಸಿಕೆ ಕಡ್ಡಾಯ ವಿರೋಧಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. 

ಶನಿವಾರದಿಂದ ಅನ್ವಯಿಸುವಂತೆ, ಸರಕಾರ ನೀಡುವ ಆರೋಗ್ಯ ಕಾರ್ಡ್ನ ಫಲಾನುಭವಿಗಳ ಪಟ್ಟಿಯಲ್ಲಿ ಲಸಿಕೆ ಪಡೆದು 7 ತಿಂಗಳೊಳಗೆ ಬೂಸ್ಟರ್ ಲಸಿಕೆ ಪಡೆಯದಿರುವ ಸಾವಿರಾರು ಜನರ ಹೆಸರನ್ನು ಕೈಬಿಡಲಾಗಿದೆ. ಬಾರ್, ರೆಸ್ಟಾರೆಂಟ್, ಸಿನೆಮ ಮಂದಿರ ಮತ್ತಿತರ ಸಾರ್ವಜನಿಕ ಕಟ್ಟಡಗಳಿಗೆ, ಫ್ರಾನ್ಸ್‌ನ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ ಆರೋಗ್ಯ ಕಾರ್ಡ್ ಅಗತ್ಯವಾಗಿದೆ. ಆರೋಗ್ಯ ಕಾರ್ಡ್ ಅನ್ನು ಲಸಿಕೆ ಕಾರ್ಡ್ ಆಗಿ ಪರಿವರ್ತಿಸುವ ಉದ್ದೇಶದ ಮಸೂದೆಗೆ ನ್ಯಾಷನಲ್ ಅಸೆಂಬ್ಲಿಯಲ್ಲಿ ಅನುಮೋದನೆ ದೊರೆತಿದ್ದು ಈಗ ಸೆನೆಟ್ ಮೇಲ್ಮನೆಯಲ್ಲಿ ಮಂಡಿಸಲಾಗಿದ್ದು ಚರ್ಚೆ ನಡೆಯುತ್ತಿದೆ.
 
ಫ್ರಾನ್ಸ್‌ನಲ್ಲಿ ಅತ್ಯಧಿಕ ವೇಗದ ಪ್ರಸರಣ ಸಾಮರ್ಥ್ಯವಿರುವ ಒಮೈಕ್ರಾನ್ ಸೋಂಕಿನ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಠಿಣ ನಿರ್ಬಂಧ ಜಾರಿಗೆ ನಿರ್ಧರಿಸಿದೆ. ಶುಕ್ರವಾರ ಫ್ರಾನ್ಸ್‌ನಲ್ಲಿ 3,30,000ಕ್ಕೂ ಹೆಚ್ಚು ಕೋವಿಡ್-19 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಒಮೈಕ್ರಾನ್ ಸೋಂಕು ಕಡಿಮೆ ಅಪಾಯಕಾರಿಯಾಗಿರುವುದರಿಂದ ಆಸ್ಪತ್ರೆಗೆ ದಾಖಲಾದರೂ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ ಎಂದು ಫ್ರಾನ್ಸ್ ನ ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News