ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಮಾತುಕತೆಗೆ ಸುಡಾನ್‌ನ ಪ್ರಜಾಪ್ರಭುತ್ವ ಪರ ಬಣದ ಒಪ್ಪಿಗೆ

Update: 2022-01-16 18:43 GMT

ಖಾರ್ಟಮ್, ಜ.16: ಸುಡಾನ್‌ನಲ್ಲಿ ಅಕ್ಟೋಬರ್‌ನಲ್ಲಿ ನಡೆದ ಸೇನಾಕ್ರಾಂತಿಯ ಬಳಿಕ ತಲೆದೋರಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಮಾತುಕತೆಗೆ ಸುಡಾನ್‌ನ ಪ್ರಮುಖ ಪ್ರಜಾಪ್ರಭುತ್ವ ಪರ ಬಣ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

  ಸುಡಾನ್‌ನ ಬಿಕ್ಕಟ್ಟಿಗೆ ಪರಿಹಾರ ರೂಪಿಸಲು ವಿವಿಧ ಬಣಗಳ ನಡುವಿನ ಮಾತುಕತೆಗೆ ನೆರವಾಗುವುದಾಗಿ ವಿಶ್ವಸಂಸ್ಥೆ ನಿಯೋಗ ನೀಡಿರುವ ಆಹ್ವಾನವನ್ನು ಸ್ವೀಕರಿಸುವುದಾಗಿ ‘ಸೆಂಟ್ರಲ್ ಕೌನ್ಸಿಲ್ ಫಾರ್ ದಿ ಫೋರ್ಸಸ್ ಆಫ್ ಫ್ರೀಡಂ ಆ್ಯಂಡ್ ಚೇಂಜ್’ (ಸಿಸಿಎಫ್‌ಎಫ್‌ಸಿ) ಬಣದ ವಕ್ತಾರ ಜಾಫರ್ ಹಸನ್ ಹೇಳಿದ್ದಾರೆ. ಸಿಸಿಎಫ್‌ಎಫ್‌ಸಿಯ ನಿಯೋಗವು ರವಿವಾರ ವಿಶ್ವಸಂಸ್ಥೆಯ ನಿಯೋಗವನ್ನು ಭೇಟಿಯಾಗಿ, ವಿವಿಧ ಪಕ್ಷಗಳ ನಡುವಿನ ಮಾತುಕತೆಗೆ ಸಿಸಿಎಫ್‌ಎಫ್‌ಸಿಯ ಪರಿಕಲ್ಪನೆಯನ್ನು ವಿವರಿಸಿದೆ ಎಂದವರು ಹೇಳಿದ್ದಾರೆ.

ಆದರೆ ಸುಡಾನ್‌ನ ಮತ್ತೊಂದು ಪ್ರಮುಖ ನಾಗರಿಕ ಬಣ ‘ಸುಡಾನೀಸ್ ಪ್ರೊಫೆಷನಲ್ ಅಸೋಸಿಯೇಷನ್’ ವಿಶ್ವಸಂಸ್ಥೆಯ ಆಹ್ವಾನವನ್ನು ನಿರಾಕರಿಸಿದೆ.

   ಕಳೆದ ಅಕ್ಟೋಬರ್‌ನಲ್ಲಿ ಸೇನೆ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ನೇತೃತ್ವದ ಸರಕಾರವನ್ನು ಪದಚ್ಯುತಗೊಳಿಸಿದಂದಿನಿಂದ ಸೇನಾಡಳಿತದ ವಿರುದ್ಧ ದೇಶದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ತಾತ್ಕಾಲಿಕ ಸರಕಾರದಲ್ಲಿ ಸೇನೆಯನ್ನು ಹೊರಗಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ, ಸೇನೆಯ ತಾಂತ್ರಿಕ ನೆರವಿನ ಉಸ್ತುವಾರಿಯಲ್ಲಿ ಸ್ವತಂತ್ರ ಸಂಪುಟ ರಚಿಸಬೇಕೆಂಬ ಷರತ್ತಿನಲ್ಲಿ ಹಮ್ದೋಕ್ ಅವರ ಸರಕಾರವನ್ನು ನವೆಂಬರ್ 21ರಂದು ಮರುಸ್ಥಾಪಿಸಲಾಗಿದೆ. ಆದರೆ ಈ ಒಪ್ಪಂದವನ್ನು ಸುಡಾನ್‌ನ ಪ್ರಜಾಪ್ರಭುತ್ವ ಪರ ಬಣ ತಿರಸ್ಕರಿಸಿದ್ದು, ನಾಗರಿಕ ಸರಕಾರಕ್ಕೆ ಅಧಿಕಾರ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದೆ. ಸೇನೆಯೊಂದಿಗೆ ಭಿನ್ನಾಭಿಪ್ರಾಯದಿಂದ ಹಮ್ದೋಕ್ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು.

 ಈ ಮಧ್ಯೆ, ಆಫ್ರಿಕನ್ ಯೂನಿಯನ್‌ನ ಪ್ರತಿನಿಧಿ ಎಡ್ವೆ ಬಂಕೋಲೆ ಖರ್ಟೂಮ್‌ಗೆ ಆಗಮಿಸಿದ್ದು ಸಿಸಿಎಫ್‌ಎಫ್‌ಸಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸುಡಾನ್ ಬಿಕ್ಕಟ್ಟು ನಿವಾರಣೆಗೆ ದೇಶದ ಎಲ್ಲಾ ಜನರ ಅಭಿಪ್ರಾಯ, ಸಲಹೆ ಸಂಗ್ರಹಿಸುವುದು ತನ್ನ ಉದ್ದೇಶ ಎಂದು ಬಂಕೋಲೆ ಹೇಳಿದ್ದಾರೆ. ಸುಡಾನ್‌ಗೆ ಅಮೆರಿಕದ ನೂತನ ರಾಯಭಾರಿಯಾಗಿರುವ ಡೇವಿಡ್ ಸ್ಯಾಟರ್‌ಫೀಲ್ಡ್ ಮತ್ತು ಆಫ್ರಿಕಾ ವ್ಯವಹಾರ ಇಲಾಖೆಯ ಸಹಾಯಕ ಕಾರ್ಯದರ್ಶಿ ಮೋಲಿ ಫೀ ಮುಂದಿನವಾರ ಸುಡಾನ್‌ಗೆ ಭೇಟಿ ನೀಡಲಿದ್ದು ರಾಜಕೀಯ ಮತ್ತು ಸೇನಾ ಪ್ರಮುಖರು, ಪ್ರಜಾಪ್ರಭುತ್ವ ಪರ ಹೋರಾಟಗಾರರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News