ಪರ್ಯಾಯ: ಶ್ರೀಕೃಷ್ಣ ಪೂಜೆಯ ಅಧಿಕಾರ ಮಂಗಳವಾರ ಹಸ್ತಾಂತರ; ಅದಮಾರುಶ್ರೀಗಳಿಂದ ಕೃಷ್ಣಾಪುರ ಶ್ರೀಗಳಿಗೆ ವರ್ಗಾವಣೆ

Update: 2022-01-17 13:55 GMT

ಉಡುಪಿ: ದ್ವೈತಮತ, ಮಧ್ವ ಸಿದ್ಧಾಂತದ ಸ್ಥಾಪಕ, ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರು ಸುಮಾರು 800 ವರ್ಷಗಳ ಹಿಂದೆ ಉಡುಪಿಯಲ್ಲಿ ಸ್ಥಾಪಿಸಿದ ಶ್ರೀಕೃಷ್ಣನ ಪೂಜೆಯ ಅಧಿಕಾರ ಹಸ್ತಾಂತರದ ಮತ್ತೊಂದು ಅಧ್ಯಾಯ ಮಂಗಳವಾರ ಮುಂಜಾನೆ 5:55ಕ್ಕೆ ಸರಿಯಾಗಿ ಪ್ರಾರಂಭಗೊಳ್ಳಲಿದೆ. ಇದೇ ಉಡುಪಿ ಅಷ್ಟಮಠಗಳ ಪರ್ಯಾಯದಲ್ಲಿ ಶ್ರೀಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರ ಕಾರ್ಯಕ್ರಮ.

ಈ ಬಾರಿ 2020ರ ಜ.18ರಿಂದ ಎರಡು ವರ್ಷಗಳ ಕಾಲ ಮೊದಲ ಬಾರಿ ಶ್ರೀಕೃಷ್ಣನ ಪೂಜೆಯನ್ನು ಯಶಸ್ವಿಯಾಗಿ ಪೂರೈಸಿದ ಸಂತೃಪ್ತಿಯೊಂದಿಗೆ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು, ತಮ್ಮ ನಾಲ್ಕನೇ ಪರ್ಯಾಯಕ್ಕೆ ಸಜ್ಜಾಗಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರಿಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮಠದ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಪರ್ಯಾಯ ಎಂಬುದು ಮಧ್ವಾಚಾರ್ಯರು ಉಡುಪಿಯಲ್ಲಿ ತಾವು ಸ್ಥಾಪಿಸಿದ ಅಷ್ಟಮಠಗಳ ಆಡಳಿತಕ್ಕೆ ಸಂಬಂಧ ಪಟ್ಟ ವ್ಯವಸ್ಥೆ. ಆರಂಭದಲ್ಲಿ ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ವ್ಯವಸ್ಥೆಯನ್ನು ಎರಡು ವರ್ಷಗಳಿಗೆ ನಡೆಯುವಂತೆ ಮಾಡಿದವರು ಸೋದೆ ಮಠದ ಶ್ರೀವಾದಿರಾಜ ಗುರುಗಳು. ಇದು ಪ್ರಾರಂಭಗೊಂಡಿದ್ದು 1522ರಲ್ಲಿ ಅಂದರೆ ಇಂದಿಗೆ ಸರಿಯಾಗಿ 500 ವರ್ಷಗಳ ಹಿಂದೆ. ಅದಮಾರುಶ್ರೀಗಳು ಈಗ ಮುಗಿಸಿರುವುದು ಮಠದ ಇತಿಹಾಸದ 250ನೇ ದ್ವೈವಾರ್ಷಿಕ ಪರ್ಯಾಯವನ್ನು.

1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ ವ್ಯವಸ್ಥೆ ಪಲಿಮಾರು ಮಠದಿಂದ ಮೊದಲುಗೊಂಡು ಪೇಜಾವರ ಮಠದವರೆಗೆ ಪ್ರತಿ 16 ವರ್ಷಗಳಿಗೊಮ್ಮೆ ಒಂದೊಂದು ಚಕ್ರವನ್ನು ಪೂರ್ಣಗೊಳಿಸುತ್ತದೆ. 2016-18ರಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗಳು ನಡೆಸಿದ ತನ್ನ ದಾಖಲೆಯ ಐದನೇ ಪರ್ಯಾಯದೊಂದಿಗೆ 31ನೇ ಚಕ್ರ (ಒಟ್ಟು 248 ಪರ್ಯಾಯ) ಪೂರ್ಣ ಗೊಂಡಿದೆ. ಇಂದು ಅದಮಾರುಶ್ರೀಗಳು ಮುಗಿಸಿ ರುವುದು 32ನೇ ಚಕ್ರದ ಎರಡನೇ ಪರ್ಯಾಯವನ್ನು. ಹಾಗೂ ಇಂದು ಕೃಷ್ಣಾಪುರಶ್ರೀಗಳು ನಡೆಸಲು ಹೊರಟಿರುವುದು ಇತಿಹಾಸದ 251ನೇ ಪರ್ಯಾಯವನ್ನು. ಈ ಪರ್ಯಾಯ 2024ರ ಜ.18ರವರೆಗೆ ಇದ್ದು, ಅಂದು ಕೃಷ್ಣಾಪುರಶ್ರೀಗಳು ಪರ್ಯಾಯದ ಅಧಿಕಾರವನ್ನು ಶೀರೂರು ಮದ ಶ್ರೀಗಳಿಗೆ ಹಸ್ತಾಂತರಿಸಲಿದ್ದಾರೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಬರುವ, ಕರಾವಳಿ ಜಿಲ್ಲೆಗಳ ನಾಡಹಬ್ಬ ಎಂದು ಕರೆಯಲಾಗುವ ಈ ಭಾಗದ ಬಹುದೊಡ್ಡ ಸಾಂಸ್ಕೃತಿಕ ಉತ್ಸವಕ್ಕೆ ಉಡುಪಿ ಮತ್ತೊಮ್ಮೆ ಸಜ್ಜಾಗಿದೆ. ಆದರೆ ಕೊರೋನದ ಕಾರಣದಿಂದ ಈ ಬಾರಿಯ ಪರ್ಯಾಯ ಸಾಂಪ್ರದಾಯಿಕತೆ ಒತ್ತು ಕೊಟ್ಟು, ಕೇವಲ ಸಂಪ್ರದಾಯ, ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಂಡಂತೆ ನಡೆಸಲು ಪರ್ಯಾಯ ಮಹೋತ್ಸವ ಸಮಿತಿ ನಿರ್ಧರಿಸಿದೆ.

ಹೀಗಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಜನವರಿ 17ರ ರಾತ್ರಿ ಇಡೀ ನಡೆಯುವ ಪರ್ಯಾಯ ವೈಭವ, ಸದ್ದುಗದ್ದಲ, ಮೆರವಣಿಗೆ, ಶೋಭಾ ಯಾತ್ರೆಗಳಾಗುವುದೂ ಇಂದು ನಡೆಯುವುದಿಲ್ಲ. ಅಷ್ಟಮಠಗಳ ಸ್ವಾಮೀಜಿಗಳು ಮಾತ್ರ ಅಲಂಕೃತ ವಾಹನಗಳಲ್ಲಿ ಕುಳಿತು ತಮ್ಮ ಪಟ್ಟದ ದೇವರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಲಿದ್ದು, ಯಾವುದೇ ಟ್ಯಾಬ್ಲೋಗಳು ಈ ಬಾರಿ ಇರುವುದಿಲ್ಲ ಎಂದು ಸಮಿತಿ ಈಗಾಗಲೇ ಪ್ರಕಟಿಸಿದೆ.

5:45ಕ್ಕೆ ಅಧಿಕಾರ ಹಸ್ತಾಂತರ: ತಮ್ಮ 13ನೇ ವರ್ಷ ಪ್ರಾಯದಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿ, 16ನೇ ವರ್ಷ ಪ್ರಾಯದಲ್ಲಿ ಮೊದಲ ಬಾರಿ ಪರ್ಯಾಯ ಪೀಠವೇರಿದ ಶ್ರೀವಿದ್ಯಾಸಾಗರತೀರ್ಥರು, ಇದೀಗ ನಾಲ್ಕನೇ ಬಾರಿಗೆ ಸರ್ವಜ್ಞ ಪೀಠವನ್ನು ಏರಲಿದ್ದಾರೆ. ಶ್ರೀಈಶಪ್ರಿಯತೀರ್ಥರು ಜ.18ರ ಮುಂಜಾನೆ 5:45ಕ್ಕೆ ಶ್ರೀಕೃಷ್ಣನ ಪೂಜೆಯ ಅಧಿಕಾರ ಹಸ್ತಾಂತರದ ದ್ಯೋತಕವಾದ ಶ್ರೀಮನ್ಮಧ್ವಾಚಾರ್ಯ ಕರಾರ್ಚಿತ ಅಕ್ಷಯ ಪಾತ್ರೆ, ಬೆಳ್ಳಿಯ ಸಟ್ಟುಗ ಹಾಗೂ ಮಠದ ಕೀಲಿಕೈಯನ್ನು ಕೃಷ್ಣಾಪುರಶ್ರೀಗಳಿಗೆ ಹಸ್ತಾಂತರಿಸಲಿದ್ದಾರೆ. ಅಲ್ಲಿಗೆ 500 ವರ್ಷಗಳಿಂದ ನಡೆದು ಬಂದಂತೆ ಪರ್ಯಾಯದ ಅಧಿಕಾರ ಒಂದು ಮಠದಿಂದ ಮತ್ತೊಂದು ಮಠಕ್ಕೆ ವರ್ಗಾವಣೆಗೊಂಡಂತೆ.

ಅನಂತರ ಅದಮಾರುಶ್ರೀಗಳು, ಪರ್ಯಾಯ ಶ್ರೀಗಳನ್ನು ಚಂದ್ರ ಶಾಲೆಗೆ ಕರೆದೊಯ್ದು ಅಲ್ಲಿರುವ ಪವಿತ್ರ ಸರ್ವಜ್ಞ ಪೀಠದ ಮೇಲೆ ಕುಳ್ಳಿರಿಸಿದಾಗ, ಕೃಷ್ಣ ಮಠಕ್ಕೆ ಮುಂದಿನ ಎರಡು ವರ್ಷಗಳ ಅವಧಿಗೆ ಹೊಸ ಪೀಠಾಧಿಪತಿಗೆ ಪಟ್ಟಾಭಿಷೇಕವಾದಂತೆ. ಇದರೊಂದಿಗೆ ಎರಡು ವರ್ಷಗಳ ಅವಧಿಗೆ ಕೃಷ್ಣಾಪುರ ಶ್ರೀಗಳೇ ಶ್ರೀಕೃಷ್ಣನ ಪೂಜೆಗೆ ಅಧಿಕೃತ ಅಧಿಕಾರ ಪಡೆದಂತಾಗುತ್ತದೆ.

ಕಳೆದೊಂದು ವಾರದಿಂದ ನಿರಂತರವಾಗಿ ನಡೆಯುತಿದ್ದ ಅದಮಾರುಶ್ರೀಗಳ ಪರ್ಯಾಯದ ಸಮಾರೋಪ, ಸೋಮವಾರ ರಾತ್ರಿ ರಥಬೀದಿಯ ಬದಲು ರಾಜಾಂಗಣದಲ್ಲಿ ಅವರಿಗೆ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಮಿತಿಯಿಂದ ಅಭಿನಂದನಾ ಕಾರ್ಯಕ್ರಮದ ಮೂಲಕ ಮುಕ್ತಾಯಗೊಂಡಿದೆ.

ಬಿಗುಭದ್ರತೆ: ಪರ್ಯಾಯದ ಸಂಭ್ರಮಕ್ಕಾಗಿ ಉಡುಪಿ ನಗರ ಸಂಪೂರ್ಣ ಸಜ್ಜಾಗಿ ನಿಂತಿದೆ. ಎಲ್ಲೆಲ್ಲೂ ತಳಿರುತೋರಣ, ಸ್ವಾಗತ ಗೋಪುರ, ಕಮಾನುಗಳು, ಮಾರ್ಗದುದ್ದಕ್ಕೂ ಸ್ವಾಗತ ಕೋರುವ ಬಟ್ಟೆಯ ಬ್ಯಾನರ್‌ಗಳು ದಾರಿಹೋಕರನ್ನು ಎದುರು ಗೊಳ್ಳುತ್ತಿವೆ. ನಗರದ ಪ್ರತಿಯೊಂದು ಕಟ್ಟಡಗಳು ರಂಗುರಂಗಿನ ಬಣ್ಣ ತಳೆದು ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಮದುಮಗಳಂತೆ ಸಿಂಗರಿಸಿ ಕೊಂಡಿವೆ. ಆದರೆ ಕೊರೋನ ಸಾಂಕ್ರಾಮಿಕದ ಮೂರನೇ ಅಲೆಯ ಭೀತಿ, ಇದರ ಹಿನ್ನೆಲೆ ಯಲ್ಲಿ ಸರಕಾರ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ, ಉಡುಪಿ ಜನತೆಯ ಪರ್ಯಾಯ ಗೌಜನ್ನು ಗೌಣವಾಗಿಸಿದೆ. ಉಡುಪಿಯ ಬೀದಿ ಬೀದಿಗಳಲ್ಲಿ ಸಂಜೆ 7ರಿಂದ ಮರುದಿನ ಮುಂಜಾನೆ ಮೂರು ಗಂಟೆಯವರೆಗೆ ನಿರಂತರವಾಗಿ ನಡೆಯುತಿದ್ದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ತೆರೆಬಿದ್ದಿದೆ. ನಡೆದರೂ ರಾತ್ರಿ 9ಗಂಟೆಯ ಮೇಲೆ ಅವುಗಳಿಗೆ ಅವಕಾಶವಿರುವುದಿಲ್ಲ. ಹೀಗಾಗಿ ರಾತ್ರಿ ಇಡೀ ‘ಪರ್ಯಾಯ ಸಂತೆಗೆ’ ಭೇಟಿ ನೀಡುತಿದ್ದ ಲಕ್ಷಾಂತರ ಮಂದಿಯ ಜಾತ್ರೆ ಈ ಬಾರಿ ಕಾಣಲು ಸಿಗುವುದು ಕಷ್ಟ.

ಉಡುಪಿ ಪರ್ಯಾಯ ಎಂದರೆ......

ಉಡುಪಿಯ ಶ್ರೀಕೃಷ್ಣನನ್ನು ಶ್ರೀಮಧ್ವಾಚಾರ್ಯರು (1238-1317) 1285ರ ಮಕರ ಸಂಕ್ರಮಣ ದಿನದಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಮಧ್ವಾಚಾರ್ಯರೇ ಎಂಟು ಮಂದಿ ಶಿಷ್ಯರಿಗೆ ಎಂಟು ಮಠಗಳನ್ನು ನೀಡಿ ಅವರ ಮೂಲಕ ಶ್ರೀಕೃಷ್ಣನಿಗೆ ಎರಡೆರಡು ತಿಂಗಳ ಅವಧಿಯ ಸರದಿ ಪೂಜೆಯ ಅವಕಾಶ ಕಲ್ಪಸಿದ್ದರೆಂದು ಹೇಳಲಾಗುತ್ತಿದೆ.

ಆದರೆ ಸೋದೆ ಮಠಾಧೀಶರಾದ ಶ್ರೀವಾದಿರಾಜ ಗುರುಗಳು (1480-1600) ತಮ್ಮ ಕಾಲಾವಧಿಯಲ್ಲಿ ಎರಡು ತಿಂಗಳ ಪರ್ಯಾಯ ಅವಧಿಯನ್ನು ಎರಡು ವರ್ಷಗಳಿಗೆ ಬದಲಿಸಿದರು. ಅವರು ಆರಂಭಿಸಿದ ಎರಡು ವರ್ಷಗಳ ಪರ್ಯಾಯ ಪದ್ಧತಿ 1522-24ರಿಂದ ಇದುವರೆಗೆ ಚಾಚೂ ತಪ್ಪದೇ ನಡೆದುಕೊಂಡು ಬಂದಿದೆ. ಅಂದು ವಾದಿರಾಜ ಗುರುಗಳು ಹಾಕಿಕೊಟ್ಟ ಕ್ರಮದಲ್ಲೇ ಅವು ಮುಂದುವರಿಯುತ್ತಿದೆ. ಪ್ರತಿ 16 ವರ್ಷಗಳಿಗೆ ಅಷ್ಟಮಠಗಳ ಪರ್ಯಾಯದ ಒಂದೊಂದು ಚಕ್ರ ಪೂರ್ಣಗೊಳ್ಳುತ್ತಿದೆ.

ದ್ವೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ ಮಧ್ವ ಶಿಷ್ಯರ ಆಶ್ರಮ ಜ್ಯೇಷ್ಠತೆ ಯಂತೆ ಪಲಿಮಾರು ಮಠದೊಂದಿಗೆ 1522ರಲ್ಲಿ ಪ್ರಾರಂಭಗೊಂಡು ಅದರ ಬಳಿಕ ಅನುಕ್ರಮವಾಗಿ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಹಾಗೂ ಕೊನೆಯಲ್ಲಿ ಪೇಜಾವರ ಮಠದೊಂದಿಗೆ ಪರ್ಯಾಯದ ಒಂದು ಚಕ್ರ ಮುಗಿಯುತ್ತದೆ. ಇವುಗಳಲ್ಲಿ ಎರಡೆರಡು ಮಠಗಳು ದ್ವಂದ್ವಮಠಗಳಾಗಿ ಪರಿಗಣಿಸಲ್ಪಡುತ್ತವೆ. ಪಲಿಮಾರು-ಅದಮಾರು, ಕೃಷ್ಣಾಪುರ-ಪುತ್ತಿಗೆ, ಶೀರೂರು-ಸೋದೆ ಹಾಗೂ ಕಾಣಿಯೂರು-ಪೇಜಾವರ ಮಠಗಳು ದ್ವಂದ್ವ ಮಠಗಳಾಗಿವೆ.

ಹೀಗೆ ಸಾಗಿ ಬಂದ ಪರ್ಯಾಯ 2018ರಲ್ಲಿ ತನ್ನ 31ನೇ ಚಕ್ರವನ್ನು ಪೂರ್ಣಗೊಳಿಸಿದೆ. 2016-2018ರಲ್ಲಿ ಪೇಜಾವರ ಮಠದ ಪರ್ಯಾಯ ದವರೆಗೆ ಎಲ್ಲಾ ಮಠಗಳು ಸರದಿಯಂತೆ 31 ಪರ್ಯಾಯಗಳನ್ನು ಪೂರ್ಣ ಗೊಳಿಸಿವೆ. 2018 ಜ.18ರಿಂದ 32ನೇ ಪರ್ಯಾಯ ಚಕ್ರ ಪ್ರಾರಂಭ ಗೊಂಡಿದ್ದು, ಇದೀಗ ಎರಡು ಮಠಗಳ ಪರ್ಯಾಯ ಮುಗಿದು, ಮೂರನೇಯದಾಗಿ ಕೃಷ್ಣಾಪುರ ಮಠದ ಪರ್ಯಾಯ ಪ್ರಾರಂಭಗೊಂಡಿದೆ.

1522ರಿಂದ ಪ್ರಾರಂಭಗೊಂಡು ಇಂದಿನವರೆಗೆ 500 ವರ್ಷಗಳು ಕಳೆದಿದ್ದು 250 ಪರ್ಯಾಯಗಳು ಇಂದಿನ ಮುಕ್ತಾಯಗೊಂಡಿವೆ. ಇಂದು ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು 251ನೇ ಪರ್ಯಾಯ ನಡೆಸಿ ಕೊಡಲಿದ್ದಾರೆ. ಇದು 2024ರ ಜ.18ರವರೆಗೆ ಮುಂದುವರಿಯಲಿದೆ.

ಕೃಷ್ಣಾಪುರ ಮಠದ ಪರಂಪರೆಯಲ್ಲಿ 34ನೇ ಯತಿ

ಆಚಾರ್ಯ ಮಧ್ವರು 800 ವರ್ಷಗಳ ಹಿಂದೆ ಸ್ಥಾಪಿಸಿದ ಎಂಟು ಮಠಗಳ ಪೈಕಿ ಕೃಷ್ಣಾಪುರ ಮಠದ 34ನೇ ಯತಿಗಳು ಇಂದು ಸರ್ವಜ್ಞ ಪೀಠವೇರಿದ ಶ್ರೀವಿದ್ಯಾಸಾಗರ ತೀರ್ಥರು. ಮಧ್ವರ ಶಿಷ್ಯರಲ್ಲಿ ಆಶ್ರಮ ಜ್ಯೇಷ್ಠತೆಯಲ್ಲಿ ಮೂರನೇಯವರಾದ ಶ್ರೀಜನಾರ್ದನತೀರ್ಥರು ಶ್ರೀಮಠದ ಮೊದಲ ಯತಿಗಳು.

ಕೃಷ್ಣಾಪುರ ಮಠದ ಮೂಲ ಮಠ ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿದೆ. ಈ ಮಠದ ಮೂಲ ದೇವರು ದ್ವಿಭುಜ ಕಾಳೀಯಮರ್ಧನ ಹಾಗೂ ನರಸಿಂಹ ದೇವರು. ಈ ಪರಂಪರೆಯಲ್ಲಿ ಶ್ರೇಷ್ಠ ಯತಿಗಳೆಂದು ಎಲ್ಲರಿಂದ ಮಾನ್ಯತೆ ಪಡೆದವರು 31ನೇಯವರಾದ ಶ್ರೀವಿದ್ಯಾಧೀಶತೀರ್ಥರು, 32ನೇ ಯತಿಗಳಾಗಿ ಕೃಷ್ಣ ಮಠದ ನವೀಕರಣ ಮಾಡಿದ ಶ್ರೀವಿದ್ಯಾಪೂರ್ಣ ತೀರ್ಥರು.

ಸರ್ವಜ್ಞ ಪೀಠವೇರುವ ಶ್ರೀವಿದ್ಯಾಸಾಗರ ತೀರ್ಥರು

ನಾಲ್ಕನೇ ಬಾರಿಗೆ ಸರ್ವಜ್ಞ ಪೀಠವೇರುವ ಶ್ರೀವಿದ್ಯಾಸಾಗರತೀರ್ಥರ ಪೂರ್ವಾಶ್ರಮದ ಹೆಸರು ರಮಾಪತಿ. 1958ರ ಮಾ.15ರಂದು ಶ್ರೀಪತಿ ತಂತ್ರಿ-ಜಾನಕಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು 13ನೇ ವಯಸ್ಸಿನಲ್ಲಿ 1971ರ ಸೆ.3ರಂದು ದ್ವಂದ್ವ ಮಠವಾದ ಪುತ್ತಿಗೆ ಮಠದ ಶ್ರೀ ಸುಜ್ಞಾನೇಂದ್ರತೀರ್ಥರಿಂದ ಸನ್ಯಾಸದೀಕ್ಷೆ ಪಡೆದರು. ಸೋದೆ ವಾದಿರಾಜ ಮಠದ ಶ್ರೀವಿಶ್ವೋತ್ತಮತೀಥರಿರ್ಂದ ವೇದಾದ್ಯಯನ ಕೈಗೊಂಡರು.

1974-76ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಅವರು ಮೊದಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದರು. ವ್ಯಾಕರಣ ಶಾಸ್ತ್ರದಲ್ಲಿ ಪಾರಂಗತರಾದ ಶ್ರೀವಿದ್ಯಾಸಾಗರ ತೀರ್ಥರು ಶಾಸ್ತ್ರ, ಸಂಪ್ರದಾಯದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದು, ವ್ರತಾನುಷ್ಠಾನ, ಜಪತಪ ಪೂಜೆಗಳಲ್ಲಿ ವಿಶೇಷ ಆಸಕ್ತರು. ಮಿತಭಾಷಿಗಳು ಹಾಗೂ ಏಕಾಂತಪ್ರಿಯರು.

1990-92 ಹಾಗೂ 2006-08ರಲ್ಲಿ ಎರಡು ಮತ್ತು ಮೂರನೇ ಬಾರಿಗೆ ಪರ್ಯಾಯ ಪೀಠವೇರಿರುವ ಇವರು ಇದೀಗ ನಾಲ್ಕನೇ ಬಾರಿಗೆ ಕೃಷ್ಣ ಪೂಜೆಯ ಕೈಂಕರ್ಯ ಪಡೆದಿದ್ದಾರೆ. ಉಡುಪಿಯ ಮುಖ್ಯಪ್ರಾಣನಿಗೆ ವಜ್ರದ ಕವಚ ತೊಡಿಸಿದವರು ಇವರು. ಶಿಥಿಲವಾಗಿದ್ದ ಶ್ರೀಕೃಷ್ಣಮಠದ ವಿವಿಧ ಕಟ್ಟಡಗಳು, ವೃಂದಾವನ, ಗೋಶಾಲೆ ಹಾಗೂ ಸುಬ್ರಹ್ಮಣ್ಯ ಗುಡಿಯ ನವೀಕರಣ ಮಾಡಿದವರು ಇವರು. ಕೋವಿಡ್ ಹಿನ್ನೆಲೆಯಲ್ಲಿ ಅವರು ಈ ಬಾರಿ ಯಾವುದೇ ವಿಶೇಷ ಕಾರ್ಯಕ್ರಮವನ್ನು ಘೋಷಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News