ಮಂಗಳೂರು; ಗೃಹ ನಿರ್ಮಾಣ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ: ದಸಂಸ ಆರೋಪ

Update: 2022-01-18 14:14 GMT

ಮಂಗಳೂರು, ಜ.18: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಸತಿ ಯೋಜನೆಯಡಿ ಕೈಗೊಳ್ಳಲಾದ ಗೃಹ ನಿರ್ಮಾಣದ ಕಾಮಗಾರಿ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ ತಾಳುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಘ ಸಮಿತಿ(ಅಂಬೇಡ್ಕರ್ ವಾದ)ಯ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ಆರೋಪಿಸಿದ್ದಾರೆ.

ಗೃಹ ನಿರ್ಮಾಣ ಕಾಮಗಾರಿ ಬಾಕಿ ಇರುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ದ.ಕ. ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2017-18ನೆ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯ 229 ಮನೆಗಳು ಪೂರ್ಣಗೊಂಡಿದೆ ಮತ್ತು 41 ಮನೆಗಳ ಕಾಮಗಾರಿ ಬಾಕಿ ಉಳಿದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರಂತೆ ಸಂಸದರು ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಹಾಗೂ ಪ್ರಧಾನ ಮಂತ್ರಿ ಅವಾಸ್ ನಗರ ಯೋಜನೆಯಡಿ ಈ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲು ಮನಪಾ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಶಕ್ತಿನಗರದಲ್ಲಿರುವ ಆಶ್ರಯ ಯೋಜನೆಯಡಿ 930 ಫಲಾನುಭವಿಗಳು ಈ ಹಿಂದೆಯೇ ಆಯ್ಕೆಯಾಗಿದ್ದರೂ ಅದು ಪೂರ್ಣಗೊಂಡಿಲ್ಲ. ಈ ಮಧ್ಯೆ ವಿವಿಧ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರ ಫಲಾನುಭವಿಗಳಿಗೆ ಹೊಸದಾಗಿ 8,000 ಮನೆಗಳನ್ನು ನಿರ್ಮಿಸಿ ಕೊಡುವ ಗುರಿ ನೀಡಲಾಗಿದೆ ಎಂದು ಜಿಪಂ ಸಿಇಒ ಸಭೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಹಲವಾರು ಬಡ ಕುಟುಂಬಗಳಿಗೆ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ದುಬಾರಿ ಬಾಡಿಗೆ ಕೊಟ್ಟು ವಾಸ ಮಾಡುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮನೆನಿರ್ಮಾಣದ ಸಂಖ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆಯೇ ವಿನಃ ಆಶ್ವಾಸನೆ ಕೊಟ್ಟಂತೆ ವಸತಿಗೃಹಗಳ ನಿರ್ಮಾಣದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಅಲ್ಲದೆ ಕೇವಲ ಪ್ರಚಾರಕ್ಕಾಗಿ ಈ ಸಭೆಗಳನ್ನು ನಡೆಸುತ್ತಿದ್ದಾರೆಯೇ ಎಂದು ಜಗದೀಶ್ ಪಾಂಡೇಶ್ವರ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News