ಉಡುಪಿ ಸರಕಾರಿ ಕಾಲೇಜು ಹಿಜಾಬ್‌ ವಿವಾದ: ಅಂತಾರಾಷ್ಟ್ರೀಯ ಮಾಧ್ಯಮ ಅಲ್-ಜಝೀರಾದಲ್ಲಿ ವರದಿ ಪ್ರಕಟ

Update: 2022-01-18 16:43 GMT

ಉಡುಪಿ: ಇಲ್ಲಿನ ಸರಕಾರಿ ಕಾಲೇಜಿನಲ್ಲಿ ಮುಸ್ಲಿಂ ಯುವತಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನೀಡದೇ ಕಳೆದ ಮೂರು ವಾರಗಳಿಂದ ಅವರಿಗೆ ಹಾಜರಾತಿ ನಿರಾಕರಿಸುತ್ತಾ ಬಂದಿರುವ ವಿಚಾರದ ಕುರಿತು ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ವಿಚಾರದ ಕುರಿತು ಅಂತಾರಾಷ್ಟ್ರೀಯ ಮಾಧ್ಯಮ ಅಲ್‌ ಜಝೀರಾ, ರುಶ್ದಾ ಫಾತಿಮಾ ಖಾನ್‌ ಬರೆದಿರುವ ವಿಸ್ತೃತ ವರದಿಯೊಂದನ್ನು ಪ್ರಕಟಿಸಿದೆ.  

"ಭಾರತದ ಕಾಲೇಜಿನಲ್ಲಿ ಮುಸ್ಲಿಂ ಯುವತಿಯರಿಗೆ ಹಿಜಾಬ್‌ ನಿರಾಕರಣೆ" ಎಂಬ ಒಕ್ಕಣೆಯಲ್ಲಿ ವರದಿ ಪ್ರಕಟವಾಗಿದೆ. ಕ್ಲಾಸ್‌ ರೂಮ್‌ ಗೆ ಹಿಜಾಬ್‌ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರನ್ನು ಶಿಕ್ಷಕರು ಗದರಿ ಹೊರಕಳುಹಿಸಿದ್ದು ಮತ್ತು, ಹಿಜಾಬ್‌ ಅನ್ನು ಕಳಚುವತೆ ಬಲವಂತಪಡಿಸುವ ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಇಡೀದಿನ ತರಗತಿಯ ಹೊರಗೆ ಕುಳಿತುಕೊಳ್ಳುವುದು ಸಂತೋಷದ ವಿಚಾರವೇನೂ ಅಲ್ಲ. ನಮ್ಮ ಉಪನ್ಯಾಸಕರು ಮತ್ತು ಸಹಪಾಠಿಗಳು ನಮ್ಮನ್ನು ಮೂದಲಿಸುತ್ತಾರೆ. ಹಿಜಾಬ್‌ ಅನ್ನು ಕಳಚಿದರೆ ನಿಮಗೇನು ತೊಂದರೆಯಾಗುತ್ತದೆ? ಎಂದು ಅವರು ಪ್ರಶ್ನಿಸುತ್ತಾರೆ. ನಿಮಗೆ ಕಾಲೇಜಿನ ನಿಯಮಗಳನ್ನು ಪಾಲಿಸಲು ಯಾಕೆ ಸಾಧ್ಯವಾಗುವುದಿಲ್ಲ ಎಂದು ಅವರು ಪ್ರಶ್ನಿಸುತ್ತಾರೆ" ಎಂದು ವಿದ್ಯಾರ್ಥಿನಿಯೋರ್ವರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಕೆಲ ವರ್ಷಗಳಿಂದ ಕರ್ನಾಟಕದಲ್ಲಿ ಹಿಂದುತ್ವವಾದಿ ಚಟುವಟಿಕೆಗಳಲ್ಲಿ ಏರಿಕೆ ಕಂಡಿದೆ. ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರಮುಖವಾಗಿ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಳ್ಳುತ್ತಿದೆ. ಕಳೆದ ತಿಂಗಳು, ಕರ್ನಾಟಕ ರಾಜ್ಯ ವಿಧಾನಸಭೆಯು ಧಾರ್ಮಿಕ ಮತಾಂತರಗಳನ್ನು ಪರಿಣಾಮಕಾರಿಯಾಗಿ ನಿಷೇಧಿಸುವ ಶಾಸನವನ್ನು ಅಂಗೀಕರಿಸಿತ್ತು. ಬಿಜೆಪಿ ಸರ್ಕಾರವು ಕ್ರಿಶ್ಚಿಯನ್ ಮಿಷನರಿ ಗುಂಪುಗಳು ಹಿಂದೂಗಳನ್ನು "ಬಲವಂತವಾಗಿ ಮತಾಂತರ" ನಡೆಸುತ್ತಿದೆ ಎಂದು ಆರೋಪಿಸಿತ್ತು ಎಂದು ವರದಿ ಉಲ್ಲೇಖಿಸಿದೆ.

ವರದಿಯ ಲಿಂಕ್‌ ಇಲ್ಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News