ಗಡಿಯಲ್ಲಿ ಸೇನಾ ಜಮಾವಣೆ ಹೆಚ್ಚಿಸುತ್ತಿರುವ ರಶ್ಯ: ಉಕ್ರೇನ್ ಗೆ ಟ್ಯಾಂಕ್ ನಿರೋಧಕ ಕ್ಷಿಪಣಿ ರವಾನೆ: ಬ್ರಿಟನ್

Update: 2022-01-18 18:15 GMT

ಲಂಡನ್,ಜ.18: ಉಕ್ರೇನ್‌ನ ಆತ್ಮರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಆ ದೇಶಕ್ಕೆ ಅಲ್ಪ ವ್ಯಾಪ್ತಿಯ ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ಕಳುಹಿಸಿಕೊಡುವುದಾಗಿ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೆಸ್ ಬ್ರಿಟನ್ ಸಂಸತ್‌ಗೆ ತಿಳಿಸಿದ್ದಾರೆ. ರಶ್ಯವು ಉಕ್ರೇನ್ ಗಡಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸೇನಾಪಡೆಗಳನ್ನು ಜಮಾಯಿಸಿರುವ ಬೆನ್ನಲ್ಲೇ ಬ್ರಿಟನ್ ಈ ಹೇಳಿಕೆ ನೀಡಿದೆ. ಉಕ್ರೇನ್ ಗಡಿಯಲ್ಲಿ ರಶ್ಯದ ಸೇನಾ ಜಮಾವಣೆಯು ಪಾಶ್ತಾತ್ಯ ರಾಷ್ಟ್ರಗಳು ಹಾಗೂ ರಶ್ಯದ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.

      ತಾನು ನೀಡಲಿರುವ ಟ್ಯಾಂಕ್ ನಿರೋಧಕ ಕ್ಷಿಪಣಿಯ ಬಳಕೆಯ ಬಗ್ಗೆ ಉಕ್ರೇನ್ ಸೈನಿಕರಿಗೆ ತರಬೇತಿ ನೀಡಲು ಸೇನಾಟ್ರೂಪರ್‌ಗಳ ಒಂದು ಸಣ್ಣ ತುಕಡಿಯನ್ನು ಕೂಡಾ ಬ್ರಿಟನ್ ಕಳುಹಿಸಿಕೊಡಲಿದೆಯೆಂದು ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ‘‘ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಉಕ್ರೇನ್ ಸಮರ್ಥವಾಗಿದೆ ಹಾಗೂ ಅದು ಹೊಂದಿರುವ ಶಸ್ತ್ರಾಸ್ತ್ರಗಳ ಸಣ್ಣ ದಾಸ್ತಾನುಗಳಿಂದ ಅದು ರಶ್ಯದ ಮುನ್ನಡೆಯ ವಿರುದ್ಧ ರಕ್ಷಣೆ ಪಡೆಯಲು ಬಳಕೆಯಾಗಲಿದೆ’’ ಎಂದು ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೆಸ್ ಹೇಳಿರುವುದಾಗಿ ಬಿಬಿಸಿ ವರದಿ ತಿಳಿಸಿದೆ.

 ಉಕ್ರೇನ್‌ಗೆ ಅಲ್ಪ ವ್ಯಾಪ್ತಿಯ ಹಾಗೂ ಸ್ಪಷ್ಟವಾದ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ಬೆಂಬಲ ನೀಡಲಾಗುತ್ತಿದೆ. ಆದರೆ ಅವು ವ್ಯೆಹಾತ್ಮಕ ಶಸ್ತ್ರಾಸ್ತ್ರಗಳಲ್ಲ ಹಾಗೂ ರಶ್ಯಕ್ಕೆ ಅವುಗಳಿಂದ ಯಾವುದೇ ಬೆದರಿಕೆಯಿಲ್ಲ. ಅವು ಕೇವಲ ಆತ್ಮರಕ್ಷಣೆಗಷ್ಟೇ ಬಳಕೆಯಾಗಲಿವೆ ಎಂದು ವ್ಯಾಲೆಸ್ ಹೇಳಿರುವುದಾಗಿ ಬಿಬಿಸಿ ವರದಿ ತಿಳಿಸಿದೆ.

     ಬ್ರಿಟನ್‌ನಿಂದ ಟ್ಯಾಂಕ್ ನಿರೋಧಕ ಕ್ಷಿಪಣಿಗಳ ಕೊಡುಗೆಯನ್ನು ಉಕ್ರೇನ್ ಸ್ವಾಗತಿಸಿದೆ. ತನ್ನ ದೇಶವು ರಶ್ಯದಿಂದ ಭದ್ರತಾ ಅಪಾಯವನ್ನು ಎದುರಿಸುತ್ತಿರುವುದಾಗಿ ಬ್ರಿಟನ್‌ನಲ್ಲಿನ ಉಕ್ರೇನ್ ರಾಯಭಾರಿ ಪ್ರಿಸ್ಟೈಕೊ ತಿಳಿಸಿದ್ದಾರೆ. ಅಮೆರಿಕ ನೇತೃತ್ವದ ಮಿಲಿಟರಿ ಮೈತ್ರಿಕೂಟ ನ್ಯಾಟೊದ ಭಾಗವಾಗಲು ತಾನು ಬಯಸುತ್ತಿರುವುದಾಗಿ ಉಕ್ರೇನ್ ಹೇಳಿದೆ.

 ಆದರೆ ಉಕ್ರೇನ್ ವಿರುದ್ಧ ಆಕ್ರಮಣದ ಯಾವುದೇ ಯೋಜನೆಯನ್ನು ಹೊಂದಿಲ್ಲವೆಂದು ರಶ್ಯ ಹೇಳಿಕೊಳ್ಳುತ್ತಿದೆಯಾದರೂ ಉಕ್ರೇನ್-ರಶ್ಯ ಗಡಿಯಲ್ಲಿ ಸೇನಾ ಜಮಾವಣೆಯನ್ನು ಅದು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದರ ಜೊತೆಗೆ ರಶ್ಯ ಬೆಂಬಲಿತ ಪ್ರತ್ಯೇಕವಾದಿಗಳು ಉಕ್ರೇನ್‌ನ ಕ್ರಿಮಿಯನ್ ಪ್ರಸ್ಥಭೂಮಿ ಹಾಗೂ ರೊಸ್ಟೊವ್ ಪ್ರದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುವುದು ಉಕ್ರೇನ್ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News