ಹಿಂದೂ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಎಂದು ವ್ಯಕ್ತಿಯನ್ನು ರೈಲಿನಿಂದ ಇಳಿಸಿ ಹಲ್ಲೆಗೈದ ಬಜರಂಗದಳದ ಕಾರ್ಯಕರ್ತರು

Update: 2022-01-19 08:02 GMT
Photo: Twitter/@AshrafFem

ಹೊಸದಿಲ್ಲಿ: ಒಟ್ಟಿಗೆ ಪ್ರಯಾಣಿಸುತ್ತಿದ್ದರೆಂದು ಮುಸ್ಲಿಂ ಪುರುಷ ಹಾಗೂ ವಿವಾಹಿತ ಹಿಂದೂ ಮಹಿಳೆಯನ್ನು ಬಜರಂಗದಳದ ಸದಸ್ಯರು ಅಜ್ಮೀರ್ ಗೆ ಹೋಗುವ ರೈಲಿನಿಂದ ಬಲವಂತವಾಗಿ ಕೆಳಗಿಳಿಸಿ ಉಜ್ಜಯಿನಿಯ ರೈಲ್ವೆ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಡೆದಿದೆ ಎಂದು indianexpress.com ವರದಿ ಮಾಡಿದೆ.  

ವ್ಯಕ್ತಿಯ ಮೇಲೆ ‘ಲವ್ ಜಿಹಾದ್’ ಆರೋಪ ಹೊರಿಸಿದ್ದ ಬಜರಂಗದಳದ ಸದಸ್ಯರು ಬಲವಂತವಾಗಿ ರೈಲಿನಿಂದ ಕೆಳಗಿಳಿಸುವ ವೇಳೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಇಂದೋರ್ ನ ಇಬ್ಬರು ಪ್ರಯಾಣಿಕರು, ಕುಟುಂಬದ ಸ್ನೇಹಿತರನ್ನು ಸರಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ಪ್ರಶ್ನಿಸಿದ್ದಾರೆ ಹಾಗೂ ಅವರ ಪೋಷಕರು ಬರುವವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜಿಆರ್ಪಿ ಪ್ರಕಾರ ಯಾವುದೇ ದೂರುದಾರರಿಲ್ಲದ ಕಾರಣ ಬಜರಂಗದಳ ಸದಸ್ಯರ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ.

ಘಟನೆ ಜನವರಿ 14 ರಂದು ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಸಣ್ಣ ಎಲೆಕ್ಟ್ರಾನಿಕ್ ಅಂಗಡಿಯ ಮಾಲಕ ಆಸಿಫ್ ಶೇಖ್ ಎಂದು ಗುರುತಿಸಲಾಗಿದ್ದು, ಮಹಿಳೆ ಖಾಸಗಿ ಶಾಲಾ ಶಿಕ್ಷಕಿಯಾಗಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವೀಡಿಯೊವೊಂದರಲ್ಲಿ, ತಮ್ಮನ್ನು ಬಜರಂಗದಳದ ಕಾರ್ಯಕರ್ತರು ಎಂದು ಹೇಳಿಕೊಂಡ ಮೂವರು ಶೇಖ್ ರನ್ನು ರೈಲಿನಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಪೊಲೀಸ್ ಠಾಣೆಯೊಳಗೆ ದಾಖಲಾದ ಮತ್ತೊಂದು ವೀಡಿಯೊದಲ್ಲಿ, ಮಹಿಳೆಯು ಬಜರಂಗದಳದ ಕಾರ್ಯಕರ್ತರ ಮೇಲೆ ಕಿಡಿಕಾರುತ್ತಿರುವುದು ಕಂಡುಬಂದಿದೆ. “ನಿಮ್ಮ ಒಂದು ತಪ್ಪು ತಿಳುವಳಿಕೆ ನನ್ನ ಜೀವನವನ್ನು ಹಾಳುಮಾಡಬಹುದು. ನಾನು ವಯಸ್ಕೆ, ನಾನು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತೇನೆ, ನಾನು ಮಕ್ಕಳಿಗೆ ಕಲಿಸುತ್ತೇನೆ,” ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಶೇಖ್ ಹಾಗೂ ಮಹಿಳೆಯು ಕುಟುಂಬದ ಸ್ನೇಹಿತರಾಗಿದ್ದು, ವರ್ಷಗಳಿಂದ ಪರಸ್ಪರ ಪರಿಚಿತರು. "ಲವ್ ಜಿಹಾದ್" ಎಂದು ಆರೋಪಿಸಿರುವ ಬಜರಂಗದಳದ ವ್ಯಕ್ತಿಗಳು ಅವರನ್ನು ಪೊಲೀಸ್ ಠಾಣೆಗೆ ಕರೆತಂದ ನಂತರ ನಾವು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ ಮತ್ತು ಅವರಿಬ್ಬರೂ ವಯಸ್ಕರಾಗಿದ್ದರಿಂದ ಮತ್ತು ಯಾವುದೇ ಅಪರಾಧವಿಲ್ಲದ ಕಾರಣ ಅವರನ್ನು ಬಿಡಲಾಯಿತು" ಎಂದು ಜಿಆರ್ಪಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತಾ ಹೇಳಿದರು.

ಪೊಲೀಸ್ ಠಾಣೆಗೆ ಕರೆತರುವಾಗ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಇಬ್ಬರೂ ನಮಗೆ ಆ ವಿಚಾರ ತಿಳಿಸಿಲ್ಲ. ಬಜರಂಗದಳದ ಕಾರ್ಯಕರ್ತರ ವಿರುದ್ಧ ಯಾವುದೇ ದೂರು ಇಲ್ಲದ ಕಾರಣ ಪ್ರಕರಣ ದಾಖಲಿಸಲಾಗಿಲ್ಲ ಎಂದು ಗುಪ್ತಾ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News