ಇತ್ತೀಚಿಗಿನ ವರ್ಷಗಳಲ್ಲಿ ದೇಶದಲ್ಲಿ ಹಸಿವಿನಿಂದ ಯಾವುದೇ ಸಾವು ಸಂಭವಿಸಿಲ್ಲ: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೇಂದ್ರ

Update: 2022-01-19 11:20 GMT

ಹೊಸದಿಲ್ಲಿ: ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಹಸಿವಿನಿಂದ ಉಂಟಾದ ಯಾವುದೇ ಸಾವು ವರದಿಯಾಗಿಲ್ಲ ಎಂದು ಕೇಂದ್ರ ಸರಕಾರ  ಮಂಗಳವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠದ ಮುಂದೆ ಈ ಮಾಹಿತಿ ನೀಡಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್. ಕೇಂದ್ರ ಈಗಾಗಲೇ 131 ಸಮಾಜ ಕಲ್ಯಾಣ ಯೋಜನೆಗಳನ್ನು ನಡೆಸುತ್ತಿರುವುದರಿಂದ ಸಮುದಾಯ ಪಾಕಶಾಲೆಗಳಿಗೆ ಪ್ರತ್ಯೇಕ ಅನುದಾನ ಒದಗಿಸಲು ಸಾಧ್ಯವಾಗುವುದಿಲ್ಲ ಎಂದೂ ತಿಳಿಸಿದರು.

ಸಮುದಾಯ ಪಾಕಶಾಲೆಗಳನ್ನು ರಾಜ್ಯಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮದೇ ಆದ ಸಂಪನ್ಮೂಲಗಳಿಂದ ನಡೆಸಬೇಕಿದೆ ಎಂದೂ ಅವರು  ಜಸ್ಟಿಸ್  ಎ ಎಸ್ ಬೋಪಣ್ಣ ಮತ್ತು ಜಸ್ಟಿಸ್ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ಕೇಂದ್ರ ಸರಕಾರವು ಸಮುದಾಯ ಪಾಕಶಾಲೆಗಳನ್ನು ನಡೆಸಬೇಕೆಂದು ನ್ಯಾಯಾಲಯ ನಿರೀಕ್ಷಿಸುವುದಿಲ್ಲ, ಆದರೆ ಅದಕ್ಕೊಂದು ಮಾದರಿ ಯೋಜನೆ ಸಿದ್ಧಪಡಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅವುಗಳನ್ನು ಜಾರಿಗೊಳಿಸುವಂತೆ ಮಾಡಬಹುದು ಎಂದು ನ್ಯಾಯಾಲಯ ಹೇಳಿತು.

ಸಮುದಾಯ ಪಾಕಶಾಲೆಗಳ ವಿಚಾರವನ್ನು ಹಸಿವಿನಿಂದುಂಟಾಗುವ ಸಾವುಗಳ ವಿಚಾರಕ್ಕೆ ಥಳಕು ಹಾಕಬಾರದು ಎಂದು ಅಟಾರ್ನಿ ಜನರಲ್ ಹೇಳಿದಾಗ, ಇತ್ತೀಚಿಗಿನ ವರ್ಷಗಳಲ್ಲಿ ಇಂತಹ ಸಾವುಗಳು ಸಂಭವಿಸಿಲ್ಲ ಎಂಬುದಕ್ಕೆ ಹೆಚ್ಚುವರಿ ಮಾಹಿತಿಯನ್ನು ಸರಕಾರ ಒದಗಿಸಬಹುದೇ ಎಂದು ನ್ಯಾಯಾಲಯ ಕೇಳಿದೆ.

"ಸರಕಾರವೇಕೆ 2015-16 ರ ಅಂಕಿಅಂಶಗಳನ್ನು ಅವಲಂಬಿಸಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ಒಂದು ಪ್ರಕರಣ ಹೊರತು ಬೇರೆ ಯಾವುದೇ ಪ್ರಕರಣ ನಡೆದಿಲ್ಲವೆಂದೇ? ಇತ್ತೀಚಿನ ಅಂಕಿಅಂಶಗಳೇನು?'' ಎಂದು ನ್ಯಾಯಾಲಯ ಪ್ರಶ್ನಿಸಿದೆ. ಈ ಕುರಿತು ರಾಜ್ಯಗಳು ವರದಿ ಮಾಡಬೇಕು, ಅವುಗಳ ಆಧಾರದ ಕೇಂದ್ರದ ಅಫಿಡವಿಟ್ ಇದೆ ಎಂದು ಅಟಾರ್ನಿ ಜನರಲ್ ತಿಳಿಸದಿರು.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಸಿವಿನಿಂದುಂಟಾದ ಸಾವುಗಳ ಕುರಿತಾದ ಇತ್ತೀಚಿನ ಅಂಕಿಅಂಶಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ತಮಿಳುನಾಡಿನಲ್ಲಿ ಕಳೆದ ಡಿಸೆಂಬರಿನಲ್ಲಿ 5 ವರ್ಷದ ಬಾಲಕನೊಬ್ಬ ಹಸಿವಿನಿಂದ ಸಾವಿಗೀಡಾಗಿದ್ದಾನೆಂದು ವರದಿಯಾಗಿತ್ತು. ಬಾಲಕ ತಳ್ಳುಗಾಡಿಯಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News