ಪಂಜಾಬ್ ಸಿಎಂ ಸಂಬಂಧಿ ಮೇಲೆ ಈ.ಡಿ.ದಾಳಿ,ಎಂಟು ಕೋ.ರೂ.ವಶ

Update: 2022-01-19 15:08 GMT

ಹೊಸದಿಲ್ಲಿ,ಜ.19: ಚುನಾವಣೆ ಸನ್ನಿಹಿತವಾಗಿರುವ ಪಂಜಾಬಿನಲ್ಲಿಯ ಅಕ್ರಮ ಮರಳುಗಾರಿಕೆ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕುರಿತು ತನಿಖೆಗೆ ಸಂಬಂಧಿಸಿದಂತೆ ನಡೆಸಿದ ದಾಳಿಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯವರ ಸಂಬಂಧಿಗೆ ಸೇರಿದ ಸ್ಥಳದಿಂದ ಎಂಟು ಕೋ.ರೂ.ಸೇರಿದಂತೆ ಸುಮಾರು 10 ಕೋ.ರೂ. ಗಳನ್ನು ಜಾರಿ ನಿರ್ದೇಶನಾಲಯ (ಈ.ಡಿ)ವು ವಶಪಡಿಸಿಕೊಂಡಿದೆ.

ಮಂಗಳವಾರ ಒಂದು ಡಝನ್ ಸ್ಥಳಗಳಲ್ಲಿ ನಡೆದಿದ್ದ ಈ.ಡಿ.ದಾಳಿಗಳು ಬುಧವಾರ ನಸುಕಿನಲ್ಲಿ ಅಂತ್ಯಗೊಂಡಿದ್ದು,ಹಲವಾರು ದಾಖಲೆಗಳು ಮತ್ತು ವಿದ್ಯುನ್ಮಾನ ಸಾಧನಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಚನ್ನಿಯವರ ಸೋದರಳಿಯ ಭೂಪಿಂದರ್ ಸಿಂಗ್ ಅಲಿಯಾಸ ಹನಿಗೆ ಸೇರಿದ ಆವರಣದಿಂದ ಎಂಟು ಕೋ.ರೂ.ಮತ್ತು ಸಂದೀಪ ಕುಮಾರ ಎಂಬ ವ್ಯಕ್ತಿಗೆ ಸೇರಿದ ಆವರಣದಿಂದ ಎರಡು ಕೋ.ರೂ. ವಶಪಡಿಸಿಕೊಳ್ಳಲಾಗಿದೆ ಎಂದರು.

ಕಳೆದ 24 ಗಂಟೆಗಳಲ್ಲಿ ದಾಳಿಗೆ ಒಳಗಾದವರ ಪ್ರಾಥಮಿಕ ವಿಚಾರಣೆಯನ್ನು ನಡೆಸಲಾಗಿದೆ. ಹೊಸದಾಗಿ ಮತ್ತು ವಿವರವಾದ ವಿಚಾರಣೆಗಾಗಿ ಅವರನ್ನು ಶೀಘ್ರವೇ ಕರೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಚಂಡಿಗಡ,ಮೊಹಾಲಿ,ಲೂಧಿಯಾನಾ ಮತ್ತು ಪಠಾನಕೋಟ್ ಸೇರಿದಂತೆ ಒಟ್ಟು 12 ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್‌ಎ)ಯಡಿ ದಾಳಿಗಳು ನಡೆದಿವೆ.

ಮಂಗಳವಾರ ದಾಳಿಗಳಿಗೆ ಪ್ರತಿಕ್ರಿಯಿಸಿದ್ದ ಚನ್ನಿ,‘ಪ.ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಂಬಂಧಿಗಳ ಮೇಲೆ ದಾಳಿಗಳನ್ನು ನಡೆಸಲಾಗಿತ್ತು. ಈ.ಡಿ ಈಗ ನನ್ನ,ನನ್ನ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರ ಮೇಲೆ ಒತ್ತಡ ಹೇರಲು ಅದೇ ಮಾದರಿಯನ್ನು ಅನುಸರಿಸುತ್ತಿದೆ. ಒತ್ತಡವನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ’ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದರು.

ಕುದ್ರತ್‌ಸಿಂಗ್ ಎಂಬಾತನೊಂದಿಗೆ ಹನಿ ಸಂಬಂಧದ ಬಗ್ಗೆ ಈ.ಡಿ.ತನಿಖೆ ನಡೆಸುತ್ತಿದ್ದು,ದಾಳಿಗಳು ಸಿಂಗ್ ಕೇಂದ್ರಿತವಾಗಿದ್ದವು ಎಂದು ಬಲ್ಲ ಮೂಲಗಳು ತಿಳಿಸಿವೆ.

ಪ್ರತಿಪಕ್ಷಗಳು ಈ ಹಿಂದೆ ಹನಿಯ ವ್ಯವಹಾರಗಳಿಗೂ ಚನ್ನಿಯವರಿಗೂ ನಂಟು ಕಲ್ಪಿಸಿದ್ದು,ಚನ್ನಿ ಅದನ್ನು ನಿರಾಕರಿಸಿದ್ದರು. ಈ.ಡಿ.ಕಳೆದ ವರ್ಷದ ನವಂಬರ್‌ನಲ್ಲಿ ಪಿಎಂಎಲ್‌ಎ ಅಡಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News