​ದಾಂಡೇಲಿ: ಮೊಸಳೆಯ ಪಾಲಾಗಲಿದ್ದ ಮೃತದೇಹ ಮೇಲಕ್ಕೆತ್ತಿದ ಅಧಿಕಾರಿಗಳು

Update: 2022-01-19 17:32 GMT

ದಾಂಡೇಲಿ, ಜ.19: ನದಿಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಯುವಕನ ಮೃತದೇಹವನ್ನು ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿದ ಘಟನೆ ನಗರದ ಸಮೀಪದಲ್ಲಿರುವ ಕೋಗಿಲಬನದ ದಬದಬೆ ಎಂಬಲ್ಲಿ ಬುಧವಾರ ನಡೆದಿದೆ.

ಇಂದು ಬೆಳಗ್ಗೆ ಸುಮಾರು 25ರಿಂದ 35ವರ್ಷ ಅಂದಾಜು ವಯಸ್ಸಿನ ಯುವಕನ ಮೃತದೇಹವೊಂದು ತೇಲಿಕೊಂಡು ಹೋಗುತ್ತಿರುವ ವಿಚಾರ ತಿಳಿದು, ಮೃತದೇಹದ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.

ಸ್ಥಳಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಆರ್.ಎಸ್. ಪವಾರ್, ಪಿಎಸೈಗಳಾದ ಐ.ಆರ್.ಗಡ್ಡೇಕರ ಮತ್ತು ಕಿರಣ್ ಪಾಟೀಲ ಅವರುಗಳ ತಂಡ ಟ್ರಕ್ ಟರ್ಮಿನಲ್ ಪ್ರದೇಶದ ಹತ್ತಿರವಿರುವ ಕಾಳಿ ನದಿಯ ದಡಕ್ಕೆ ಆಗಮಿಸಿ ಮುಂದಿನ ಕಾರ್ಯಾಚರಣೆಗೆ ಮುಂದಾದರು.

ರಾಪ್ಟ್‌ಗಳನ್ನು ತರಿಸಿಕೊಂಡು ಅದರಲ್ಲಿ ನುರಿತ ಈಜುಗಾರರಾದ ಬಾಪುಜಿ ಪೇಟೆ, ಸುನೀಲ್, ಅರುಣ್, ಗೋಪಾಲ, ಪ್ರವೀಣ, ಯೂಸೂಬ್ ಮತ್ತು ಗಣೇಶ ಅವರನ್ನೊಳಗೊಂಡ ತಂಡ ಮೃತ ದೇಹವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಯಿತು. ಬಳಿಕ ಕೋಗಿಲಬನದ ಹತ್ತಿರ ದಬದಬೆ ಎಂಬಲ್ಲಿ ಮೃತದೇಹವನ್ನು ಮೊಸಳೆಯ ಬಾಯಿಯಿಂದ ಎಳೆದು ತರುವಲ್ಲಿ ಈ ತಂಡ ಯಶಸ್ವಿಯಾತು.

ಮೃತದೇಹ ಕೊಳೆತಿತ್ತು ಮತ್ತು ಮೊಸಳೆ ಮೃತದೇಹದ ಬಹುತೇಕ ಭಾಗಗಳನ್ನು ತಿಂದಿರುವುದು ಕಂಡು ಬಂದಿತ್ತು ಈ ಹಿನ್ನೆಲೆಯಲ್ಲಿ ಅಲ್ಲೆ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ಅಲ್ಲೇ ದಫನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ತಹಶೀಲ್ದಾರ್ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತರ ಮೇಲುಸ್ತುವಾರಿಯಲ್ಲಿ ಡಿವೈಎಸ್ಪಿ ಗಣೇಶ್. ಕೆ.ಎಲ್. ಅವರ ಮಾರ್ಗದರ್ಶನದಲ್ಲಿ ಪಿಎಸೈಗಳಾದ ಐ. ಆರ್. ಗಡ್ಡೇಕರ ಮತ್ತು ಕಿರಣ್ ಪಾಟೀಲ ಅವರ ತಂಡ ಮುಂದಿನ ಕ್ರಮ ಕೈಗೊಂಡಿದೆ. ಸ್ಥಳಕ್ಕೆ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ನಿಂಗಾಣಿ ಮತ್ತು ವಲಯಾರಣ್ಯಾಧಿಕಾರಿ ವಿನಯ್ ಭಟ್ ಅವರು ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News