ಪಾಕಿಸ್ತಾನ: ಧರ್ಮನಿಂದೆ ಪ್ರಕರಣ; ಮಹಿಳೆಗೆ ಮರಣದಂಡನೆ ಶಿಕ್ಷೆ

Update: 2022-01-20 18:19 GMT
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್, ಜ.20: ಪ್ರವಾದಿ ಮುಹಮ್ಮದ್ ಮತ್ತು ಅವರ ಪತ್ನಿಯರಲ್ಲಿ ಒಬ್ಬರನ್ನು ಅವಮಾನಿಸುವ ರೀತಿಯ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಧರ್ಮನಿಂದೆ ಎಸಗಿದ ಅಪರಾಧಕ್ಕೆ ಪಾಕಿಸ್ತಾನದ ನ್ಯಾಯಾಲಯ  ಮಹಿಳೆಗೆ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಕಾನೂನು ಪ್ರಕಾರ, ಪ್ರವಾದಿಯವರನ್ನು ಅವಮಾನಿಸಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು. ಈ ಅಪರಾಧ ಎಸಗಿದ್ದ ಅನೀಖಾ ಅತೀಖ್ ಎಂಬ ಮಹಿಳೆಗೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿನ ವಿಚಾರಣಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ ಎಂದು ವರದಿಯಾಗಿದೆ. ಆರೋಪಿ ಮಹಿಳೆ ತನ್ನ ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡ ಧರ್ಮ ನಿಂದನೆಯ ವಿಷಯ ಮತ್ತು ದೂರುದಾರರಿಗೆ ಕಳಿಸಿದ ಸಂದೇಶಗಳು ಹಾಗೂ ವ್ಯಂಗ್ಯಚಿತ್ರಗಳು ಸಂಪೂರ್ಣ ಅಸಹನೀಯವಾಗಿವೆ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಅದ್ನಾನ್ ಮುಷ್ತಾಖ್ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.

2020ರಲ್ಲಿ ದಾಖಲಾದ ಪ್ರಕರಣ ಇದಾಗಿದೆ. ದೂರುದಾರ ಹಸ್ನತ್ ಫರೂಖ್ ತನ್ನೊಂದಿಗೆ ಸ್ನೇಹ ಬಯಸಿ ಕಳಿಸಿದ್ದ ಸಂದೇಶವನ್ನು ತಾನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡು, ಉದ್ದೇಶಪೂರ್ವಕವಾಗಿ ಧಾರ್ಮಿಕ ವಿಷಯಗಳ ಚರ್ಚೆಯಲ್ಲಿ ತನ್ನನ್ನೂ ಶಾಮೀಲಾಗಿಸಿಕೊಂಡು, ತನ್ನ ವಿರುದ್ಧವಾಗಿ ನಿಲ್ಲಬಲ್ಲ ವಿಷಯಗಳನ್ನು ಸಂಗ್ರಹಿಸಿಕೊಂಡು ಈ ರೀತಿಯ ದೂರು ದಾಖಲಿಸಿದ್ದಾನೆ. ತಾನು ನಿರಪರಾಧಿ ಎಂದು 26 ವರ್ಷದ ಅತೀಖ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಮರಣದಂಡನೆ ಶಿಕ್ಷೆಯನ್ನು ಲಾಹೋರ್ ಹೈಕೋರ್ಟ್ ದೃಢಪಡಿಸಿದರೆ ಜಾರಿಯಾಗುತ್ತದೆ. ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲೂ ಆತಿಖ್‌ಗೆ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News