​ಮಹಾರಾಷ್ಟ್ರ : 11 ತಿಂಗಳಲ್ಲಿ 2,500 ರೈತರ ಆತ್ಮಹತ್ಯೆ

Update: 2022-01-21 01:46 GMT
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ರೈತರ ಹತಾಶ ಸ್ಥಿತಿ ಮುಂದುವರಿದಿದ್ದು, 2021ರ ಮೊದಲ 11 ತಿಂಗಳಲ್ಲಿ ರಾಜ್ಯದಲ್ಲಿ 2498 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಹೊರೆ ತಾಳಲಾರದೇ 2020ರಲ್ಲಿ ರಾಜ್ಯದಲ್ಲಿ 2547 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಹೊರತಾಗಿಯೂ, ಸಾಲ ಮರುಪಾವತಿ ಮಾಡಲು ಅಸಮರ್ಥರಾದ ರೈತರ ಆತ್ಮಹತ್ಯೆ ಆತಂಕಕಾರಿ ಪ್ರಮಾಣದಲ್ಲಿ ಮುಂದುವರಿದಿರುವುದು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಔರಂಗಾಬಾದ್ ಪ್ರದೇಶದಲ್ಲಿ 804 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ನಾಗ್ಪುರ ವಿಭಾಗದಲ್ಲಿ 309 ಮಂದಿ ರೈತರು ಜೀವನಕ್ಕೆ ಕೊನೆ ಹಾಡಿದ್ದಾರೆ. ಕೊಂಕಣ ವಿಭಾಗದಲ್ಲಿ ಮಾತ್ರ ಕಳೆದ ಎರಡು ವರ್ಷದಿಂದ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. "ಹಲವು ಸಾಲ ಮನ್ನಾ ಮತ್ತು ರೈತರಿಗೆ ಹಲವು ಯೋಜನೆಗಳ ಹೊರತಾಗಿಯೂ, ಆತ್ಮಹತ್ಯೆ ದರ ಕಳೆದ ವರ್ಷಕ್ಕಿಂತ ಕಡಿಮೆಯಾಗಿಲ್ಲ" ಎಂದು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಅರ್ಜಿ ಸಲ್ಲಿಸಿದ್ದ ಜಿತೇಂದ್ರ ಘಾಡ್ಗೆ ಹೇಳಿದ್ದಾರೆ.

ವಿದರ್ಭ ಪ್ರದೇಶದಲ್ಲಿ ರೈತರ ಆತ್ಮಹತ್ಯೆ ಸದಾ ಅತ್ಯಧಿಕ. ರಾಜ್ಯದಲ್ಲಿ ಸಂಭವಿಸಿದ ಒಟ್ಟು ರೈತರ ಆತ್ಮಹತ್ಯೆಗಳ ಪೈಕಿ ಶೇಕಡ 50ರಷ್ಟು ಪ್ರಕರಣಗಳು ಈ ಭಾಗದಿಂದ ವರದಿಯಾಗಿವೆ. ಅಮರಾವತಿ ಜಿಲ್ಲೆ (331) ಈ ವರ್ಷ ಯಾವತ್ಮಲ್ (270) ಜಿಲ್ಲೆಯನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ ಎಂದು ’ದ ಯಂಗ್ ವಿಷಲ್‌ ಬ್ಲೋವರ್ಸ್‌ ಫೌಂಡೇಷನ್’ನ ಘಾಡ್ಗೆ ತಿಳಿಸಿದ್ದಾರೆ.

"ರೈತರ ಮಾನಸಿಕ ಆರೋಗ್ಯ ಆಯಾಮವನ್ನು ಕಡೆಗಣಿಸಿ, ಎಲ್ಲರಿಗೂ ಸಾಲ ಮನ್ನಾ ಮಾಡುವುದು ಸಮಸ್ಯೆಗೆ ಉತ್ತರವಲ್ಲ. ದಿವಾಳಿತನ ಯೋಜನೆ ಕೇವಲ ದಿವಾಳಿಯಾದ ರೈತರಿಗೆ ಮಾತ್ರ ಸಿಗಬೇಕು ಹಾಗೂ ಮಾನಸಿಕ ಆರೋಗ್ಯ ಬೆಂಬಲ ಕಡಿಮೆ ವೆಚ್ಚದಾಯಕ ಹಾಗೂ ಸಮಸ್ಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲದು. ಹತಾಶ ಸ್ಥಿತಿಯಲ್ಲಿರುವ ರೈತರನ್ನು ಸೋಸುವುದು ಅಗತ್ಯ. ಇದರಿಂದ ತೀರಾ ಅಗತ್ಯತೆ ಇರುವವರಿಗೆ ನೆರವು ದೊರಕುತ್ತದೆ" ಎಂದು ಅವರು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News